

ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 50 ರನ್‌ಗಳಿಂದ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 7 ವಿಕೆಟ್ ನಷ್ಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್‌ಗೆ 196 ರನ್‌ಗಳ ಗುರಿಯನ್ನು ನೀಡಿತ್ತು. ಆದರೆ ಸಿಎಸ್‌ಕೆ 8 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿ ಸೋಲನುಭವಿಸಿತು.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡದ ಆರಂಭ ಉತ್ತಮವಾಗಿತ್ತು. ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಮೊದಲ ವಿಕೆಟ್‌ಗೆ 5 ಓವರ್‌ಗಳಲ್ಲಿ 45 ರನ್ ಸಿಡಿಸಿದರು. 16 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 32 ರನ್ ಬಾರಿಸಿ ಔಟ್ ಆದರು. ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ 14 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 27 ರನ್ ಬಾರಿಸಿ ಔಟ್ ಆದರು. ಆರಂಭಿಕ ವಿರಾಟ್ ಕೊಹ್ಲಿ 31 ರನ್‌ಗಳಿಗೆ ಆಟ ಮುಗಿಸಿದರು.ಮಧ್ಯಮ ಕ್ರಮಾಂಕದಲ್ಲಿ ಅದ್ಭುತವಾಗಿ ಬ್ಯಾಟ್ ಮಾಡಿದ ರಜತ್ ಪಟಿದಾರ್ ಅಬ್ಬರಿಸಿದರು. ಇವರು 32 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 51 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಕೆಳ ಕ್ರಮಾಂಕದಲ್ಲಿ ಟೀಮ್ ಡೇವಿಡ್ 8 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ಸಹಾಯದಿಂದ 22 ರನ್ ಬಾರಿಸಿ ಔಟ್ ಆದರು. ಚೆನ್ನೈ ತಂಡದ ಪರ ನೂರ್ ಅಹ್ಮದ್ 3, ಮತೀಶ್ ತೀಕ್ಷಣ್ 2 ವಿಕೆಟ್ ಕಬಳಿಸಿದರು.ಆರ್‌ಸಿಬಿ ನೀಡಿದ 197 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಚೆನ್ನೈ ತಂಡದ ಆರಂಭ ಕಳಪೆ ಯಾಗಿತ್ತು. ಆರಂಭಿಕ ರಾಹುಲ್ ತ್ರಿಪಾಠಿ (5), ನಾಯಕ ರುತುರಾಜ್ ಗಾಯಕ್ವಾಡ್ (0) ಜವಾಬ್ದಾರಿಯುತ ಆಟವನ್ನು ಆಡುವಲ್ಲಿ ವಿಫಲರಾದರು. ಇವರಿಬ್ಬರೂ ಜೋಶ್ ಹ್ಯಾಜಲ್ ವುಡ್ ತೋಡಿದ ಖೆಡ್ಡಾಗೆ ಬಲಿಯಾದರು. ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ ಮ್ಯಾಜಿಕ್ ಮಾಡಲಿಲ್ಲ. ಇವರಿಗೆ ಭುವನೇಶ್ವರ್ ಕುಮಾರ್ ಖೆಡ್ಡಾ ತೋಡಿದರು.ಆಲ್‌ರೌಂಡರ್ ಸ್ಯಾಮ್ ಕರನ್ (8), ಶಿವಂ ದುಬೆ (19) ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಲಿಲ್ಲ. ಆರಂಭಿಕರಾದ ರಚಿನ್ ರವೀಂದ್ರ 31 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ 41 ರನ್ ಬಾರಿಸಿ ಔಟ್ ಆದರು.