Wednesday, July 22, 2026
spot_imgspot_img
spot_imgspot_img

ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಭೀಕರ ಪ್ರತೀಕಾರ: ಪ್ರಿಯತಮೆಯ ತಾಯಿಗೆ ಬೆಂಕಿ ಹಚ್ಚಿ ಯುವಕ ಪರಾರಿ

- Advertisement -
- Advertisement -

ಬೆಂಗಳೂರು: ಮಗಳ ಮದುವೆಗೆ ನಿರಾಕರಿಸಿದ್ದಕ್ಕೆ ಪ್ರತೀಕಾರವಾಗಿ ಪ್ರಿಯತಮೆಯ ತಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಭೀಕರ ಘಟನೆ ಬಸವೇಶ್ವರನಗರದಲ್ಲಿ ಬೆಳಕಿಗೆ ಬಂದಿದೆ. ತೀವ್ರ ಸುಟ್ಟ ಗಾಯಗಳಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೀತಾ (40) ಅವರು ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.


ಪೊಲೀಸರ ಮಾಹಿತಿ ಪ್ರಕಾರ, ಡಿಸೆಂಬರ್ 22ರಂದು ಈ ದುರ್ಘಟನೆ ನಡೆದಿದ್ದು, ಗೀತಾ ಅವರು ಕಳೆದ 16 ದಿನಗಳಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶೇ.50ರಷ್ಟು ಸುಟ್ಟ ಗಾಯಗಳಾಗಿದ್ದ ಕಾರಣ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ತಮಿಳುನಾಡು ಮೂಲದ ಗೀತಾ ಅವರು ಮಗಳೊಂದಿಗೆ ಬಸವೇಶ್ವರನಗರದ ಸಾಣೇಗುರುವನಹಳ್ಳಿಯಲ್ಲಿ ವಾಸವಾಗಿದ್ದು, ಮನೆಯ ಸಮೀಪವೇ ಅಂಗಡಿ ನಡೆಸಿಕೊಂಡು ಜೀವನ ನಡೆಸುತ್ತಿದ್ದರು. ಗೀತಾ ಅವರ ಪುತ್ರಿ ಹಾಗೂ ಮುತ್ತು ಅಭಿಮನ್ಯು ಎಂಬ ಯುವಕ ಪರಸ್ಪರ ಪ್ರೀತಿಸುತ್ತಿದ್ದು, ಆರಂಭದಲ್ಲಿ ಗೀತಾ ಅವರು ಮದುವೆಗೆ ಒಪ್ಪಿಗೆಯನ್ನೂ ಸೂಚಿಸಿದ್ದರು. ಆದರೆ, ಆರೋಪಿ ಮದ್ಯವ್ಯಸನಿಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಅವನ ವರ್ತನೆ ಅಸಭ್ಯವಾಗಿದ್ದರಿಂದ ಮದುವೆಗೆ ಸ್ಪಷ್ಟ ನಿರಾಕರಣೆ ವ್ಯಕ್ತಪಡಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ಕಳೆದ ಆರು ತಿಂಗಳಿಂದ ಗೀತಾ ಅವರ ಮನೆಯಲ್ಲೇ ವಾಸವಾಗಿದ್ದ ಆರೋಪಿ, ಮದುವೆ ಮಾಡಿಕೊಡುವಂತೆ ನಿರಂತರ ಒತ್ತಡ ಹೇರುತ್ತಿದ್ದ. ಈ ಹಿನ್ನೆಲೆಯಲ್ಲಿ ಗೀತಾ ಅವರೊಂದಿಗೆ ಅವನು ಆಗಾಗ್ಗೆ ಜಗಳವಾಡುತ್ತಿದ್ದ. ಡಿಸೆಂಬರ್ 22ರಂದು ರಾತ್ರಿ ನಡೆದ ಜಗಳದ ಬಳಿಕ, ಗೀತಾ ಅವರು ನಿದ್ರೆಗೆ ಜಾರಿದ ಸಮಯದಲ್ಲಿ ಆರೋಪಿ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಘಟನೆ ವೇಳೆ ಮನೆಯಲ್ಲಿದ್ದ ಗೀತಾ ಅವರ ಮಗಳು ನೆರೆಹೊರೆಯವರ ನೆರವಿನಿಂದ ಬೆಂಕಿ ನಂದಿಸಿ ತಾಯಿಯನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಗೀತಾ ಅವರು ಮೃತಪಟ್ಟಿದ್ದಾರೆ.
ಕೃತ್ಯ ಎಸಗಿದ ಬಳಿಕ ತಮಿಳುನಾಡಿಗೆ ಪರಾರಿಯಾಗಿದ್ದ ಆರೋಪಿ ಮುತ್ತು ಅಭಿಮನ್ಯುವನ್ನು ಪೊಲೀಸರು ಬಂಧಿಸಿದ್ದು, ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!