



ಬಂಟ್ವಾಳ: ನಿವೃತ್ತ ಸೈನಿಕ ,ಹಿರಿಯ ನಾಗರಿಕರೋರ್ವರು ಬಿಸಿರೋಡಿನ ರಾಷ್ಟ್ರೀಕೃತ ಬ್ಯಾಂಕಿನಿಂದ ಹಣವನ್ನು ಡ್ರಾ ಮಾಡಿದ ಕೆಲವೇ ಸಮಯದಲ್ಲಿ ಲಕ್ಷಾಂತರ ರೂ ನಗದು ಇದ್ದ ಬ್ಯಾಗ್ ನ್ನು ಕಳವಾದ ಘಟನೆ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳ ತಾಲೂಕಿನ ರೈಮಂಡ್ ಲೋಬೋ ನಗರದ ಗ್ಲಾಡಿರಾ ನಿವಾಸಿಯಾಗಿರುವ ಅಂಬ್ರೋಸ್ ಡಿಸೋಜ ಅವರ ಲಕ್ಷಾಂತರ ರೂ ಇದ್ದ ಬ್ಯಾಗ್ ಕಳವಾಗಿದೆ.
ಬಿ.ಮೂಡ ಗ್ರಾಮದ ಬಿಸಿರೋಡಿನಲ್ಲಿರುವ ಎಸ್.ಬಿ.ಐ(SBI) ಬ್ಯಾಂಕ್ ನ ಒಳಗಿನಿಂದ ರೂ.1,30,000 ನಗದು ಕಳವಾಗಿದೆ.
ಅಂಬ್ರೋಸ್ ಅವರು ನಿವೃತ್ತ ಸೈನಿಕರಾಗಿದ್ದು, ಅವರು ಬರುವ ಪೆನ್ಸನ್ ಹಣವನ್ನು ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಅವರ ಖಾತೆಯಿಂದ ಡ್ರಾ ಮಾಡುತ್ತಿದ್ದರು. ಒಟ್ಟು 50 ಸಾವಿರ ಹಣವನ್ನು ಬ್ಯಾಗ್ ಒಂದರಲ್ಲಿ ಇರಿಸಿಕೊಂಡು ಬಿಸಿರೋಡಿನ ಎಸ್.ಬಿ.ಐ ಬ್ಯಾಂಕ್ ಗೆ ಬಂದಿದ್ದರು. ಇಲ್ಲಿನ ಇವರ ಖಾತೆಯಿಂದ 80 ಸಾವಿರ ಹಣವನ್ನು ಡ್ರಾ ಮಾಡಿ, ಒಟ್ಟು 1,30,000 ಹಣವನ್ನು ಒಂದೇ ಬ್ಯಾಗ್ ನಲ್ಲಿ ಹಾಕಿ ಬ್ಯಾಂಕ್ ನ ಟೇಬಲ್ ಮೇಲೆ ಇಟ್ಟು, ಪಾಸ್ ಬುಕ್ ಎಂಟ್ರಿ ಮಾಡಲು ಕೌಂಟರ್ ಬಳಿ ಹೋಗಿದ್ದರು.
ಅಲ್ಲಿ ಎಂಟ್ರಿ ಮಾಡಿಸಿ ವಾಪಸು ಟೇಬಲ್ ಕಡೆ ಬಂದಾಗ ಬ್ಯಾಗ್ ಅಲ್ಲಿರದೆ ಕಾಣೆಯಾಗಿತ್ತು. ಇದೀಗ ಪಾಸ್ ಬುಕ್ ಹಾಗೂ ದಾಖಲೆಗಳಿದ್ದ ಕಳವಾದ ಬ್ಯಾಗ್ ಬಿಸಿರೋಡು ಕೈಕುಂಜೆ ರಸ್ತೆಯಲ್ಲಿ ಸಿಕ್ಕಿದೆ. ಕಳವು ಆಗಿರುವ ಹಣವನ್ನು ಮತ್ತು ಕಳವು ಮಾಡಿದ ಕಳ್ಳರನ್ನು ಪತ್ತೆ ಮಾಡಿಕೊಡಿ ಎಂದು ಅಂಬ್ರೋಸ್ ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.