ವಿಟ್ಲ: ಕರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಮುಂಬಯಿನಿಂದ ಕೇಪು ಗ್ರಾಮದ ಅಟೋಚಾಲಕರೊಬ್ಬರಿಗೆ ಬರಬೇಕಾದ ಅಗತ್ಯ ಔಷಧಿ ಪಾರ್ಸೆಲ್ ಅನ್ನು ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅವರು ಮುತುವರ್ಜಿ ವಹಿಸಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇಪು ಗ್ರಾಮದ ಅಟೋಚಾಲಕರೊಬ್ಬರ ಪತ್ನಿಗೆ ವೈದ್ಯರ ಶಿಫಾರಸ್ಸಿನ ಮೇರೆಗೆ ಮುಂಬಯಿನ ಕಂಪೆನಿಯೊಂದು ಉಚಿತವಾಗಿ ಔಷಧಿಯನ್ನು ನೀಡುತ್ತಿತ್ತು. ಆದರೆ ಕೊರೊನಾ ಲಾಕ್ ಡೌನ್ ಗಳು ಆರಂಭವಾಗುತ್ತಿದ್ದಂತೆ ಔಷಧಿಯ ಬೇಡಿಕೆ ಸಲ್ಲಿಸಿದರೂ, ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ. ಔಷಧಿ ಕೊರತೆಯ ಬಗ್ಗೆ ಪಿಎಂ ಪೋರ್ಟಲ್ ಸಹಿತ ಹಲವು ವ್ಯವಸ್ಥೆಯನ್ನು ಸಂಪರ್ಕಿಸಿದರೂ ಪ್ರಯೋಜನವಾಗದ ಸಮಯದಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ ರೋನ್ಸ್ ಬಂಟ್ವಾಳ್ ಅವರು ಸಹಾಯಕ್ಕೆ ನಿಂತಿದ್ದಾರೆ. ತಕ್ಷಣ ಕಂಪನಿಯ ಬಗ್ಗೆ ವಿಚಾರಿಸಿ, ಭಾರತ್ ಬ್ಯಾಂಕ್ ಮಾಜಿ ನಿರ್ದೇಶಕ ಅಶೋಕ್ ಎಂ. ಕೋಟ್ಯಾನ್ ಅವರ ಮೂಲಕ ಕಂಪನಿಯನ್ನು ಸಂಪರ್ಕಿಸಿ, ಔಷಧಿಯ ಪಾರ್ಸೆಲ್ ಫಲಾನುಭವಿಗಳಿಗೆ ತಲುಪುವಂತೆ ಮಾಡಿದ್ದಾರೆ.

