ಜೈಪುರ: ರಾಜಸ್ಥಾನ ಸರ್ಕಾರದ ಬಿಕ್ಕಟ್ಟು ಮತ್ತೊಂದು ತಿರುವು ಪಡೆದುಕೊಂಡಿದ್ದು, ಉಪಮುಖ್ಯಮಂತ್ರಿ ಹುದ್ದೆಯಿಂದ ಸಚಿನ್ ಪೈಲಟ್ ಅವರನ್ನು ವಜಾ ಮಾಡಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೆವಾಲ ಮಾಹಿತಿ ನೀಡಿದ್ದಾರೆ. ಸರ್ಕಾರದ ವಿರುದ್ಧ ಬಂಡಾಯವೆದ್ದ ಸಚಿನ್ ಪೈಲಟ್ ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕಲಾಗಿದೆ ಎಂದಿ ತಿಳಿಸಿದ್ದಾರೆ.
ಇಂದೂ ಕಾಂಗ್ರೆಸ್ ಸಭೆಗೆ ಪೈಲಟ್ ಗೈರು
ಇಂದು ಕೂಡ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿತ್ತು. ಆದರೆ ಇಂದೂ ಸಭೆಗೆ ಸಚಿನ್ ಪೈಲಟ್ ಗೈರಾಗಿದ್ದರು.ಹೀಗಾಗಿ ಡಿಸಿಎಂ ಪೈಲಟ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಎಂಬ ದೂರು ಕೇಳಿಬಂದಿತ್ತು. ಹೀಗಾಗಿ ಸಭೆಗೆ ಹಾಜರಾಗದೇ ಸರ್ಕಾರದ ವಿರುದ್ಧ ಬಂಡಾಯ ಮುಂದುವರಿಸಿದ್ದ ಸಚಿನ್ ಪೈಲಟ್ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ ಎಂದು ತಿಳಿದುಬಂದಿದೆ.
ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷರಾಗಿ ಗೋವಿಂದ್ ಸಿಂಗ್ ದೋತಾಸ್ರಾ ನೇಮಕ
ಇನ್ನು ಡಿಸಿಎಂ ಹುದ್ದೆಯಿಂದ ಮಾತ್ರವಲ್ಲದೇ, ರಾಜಸ್ಥಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದಲೂ ಸಚಿನ್ ಪೈಲಟ್ ಅವರನ್ನು ಕಿತ್ತು ಹಾಕಲಾಗಿದೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಾಯಕ ಗೋವಿಂದ್ ಸಿಂಗ್ ದೋತಾಸ್ರಾ ಅವರನ್ನು ನೇಮಕ ಮಾಡಲಾಗಿದೆ ಎಂದು ಸುರ್ಜೆವಾಲಾ ತಿಳಿಸಿದ್ದಾರೆ.
ಈ ನಡುವೆ ಸಿಎಂ ಅಶೋಕ್ ಗೆಹ್ಲೋಟ್ ರಾಜಭವನಕ್ಕೆ ತೆರಳಿದ್ದು, ಗವರ್ನರ್ ಕಲ್ರಾಜ್ ಮಿಶ್ರಾ ಅವರನ್ನು ಭೇಟಿಯಾಗಿದ್ದಾರೆ. ಹೀಗಾಗಿ ರಾಜಸ್ಥಾನದ ಸರ್ಕಾರದ ಬಿಕ್ಕಟ್ಟು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ.