ಪೋಷಕರ ನಿದ್ದೆಗೆಡಿಸಿದ ಖಾಸಗಿ ಶಾಲಾ ಸಂದೇಶ.!
ಪಠ್ಯ ಪುಸ್ತಕ, ಸಮವಸ್ತ್ರ ಹೆಸರಲ್ಲಿ ಶುಲ್ಕ ವಸೂಲಿ.!
ಶಿಕ್ಷಣ ಸಚಿವರ ಮಾತಿಗೆ ಕವಡೆ ಕಾಸಿಗೂ ಕಿಮ್ಮತ್ತಿಲ್ಲ.!
ಶಾಲಾ ವಿರುದ್ಧ ಕ್ರಮಕ್ಕೆ ಪೋಷಕರ ಒತ್ತಾಯ.!
ಮಂಗಳೂರು: ಕೊರೊನಾ ಭೀತಿಯಿಂದ ಶಾಲಾ-ಕಾಲೇಜುಗಳು ಬಂದ್ ಆಗಿವೆ. ಹೀಗಾಗಿ ಅನೇಕ ಕಡೆ ಆನ್ ಲೈನ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ. ಈ ನಡುವೆ ಕೆಲ ಖಾಸಗಿ ಶಾಲೆಗಳು ಶುಲ್ಕ ವಸೂಲಿಗೆ ಮುಂದಾಗಿವೆ. ಸಚಿವರು ಈ ಬಗ್ಗೆ ಎಚ್ಚರಿಕೆ ನೀಡಿದ್ರೂ ಕೆಲ ಖಾಸಗಿ ಶಾಲೆಗಳು ಯಾವುದೇ ತಲೆಗೆಡಿಸಿಕೊಂಡಿಲ್ಲ.
ಈ ಸಾಲಿನಲ್ಲಿ ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಖಾಸಗಿ ಶಾಲೆಯೊಂದು ಹೊರತಾಗಿಲ್ಲ. ಆ ಖಾಸಗಿ ಶಾಲೆಯಿಂದ ಮೊಬೈಲ್ ಗೆ ಕಳುಹಿಸುತ್ತಿರುವ ಸಂದೇಶ ವಿದ್ಯಾರ್ಥಿಗಳ ಪೋಷಕರಿಗೆ ತಲೆನೋವಾಗಿ ಪರಿಣಮಿಸಿದೆ.
ಖಾಸಗಿ ಶಾಲೆ ಕಳುಹಿಸಿದ ಸಂದೇಶ ಏನು..?
ಕೊರೊನಾದಿಂದ ಎಲ್ಲರೂ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಆದ್ರೆ ರಾಜ್ಯ ಪಠ್ಯಪುಸ್ತಕ ಸಂಘ ನಿಗದಿತ ಅವಧಿಯಲ್ಲಿ ಪುಸ್ತಕ ಖರೀದಿ ಮಾಡಬೇಕೆಂದು ಒತ್ತಡ ಹಾಕುತ್ತಿದೆ. ಈ ಹಿನ್ನಲೆಯಲ್ಲಿ ಖಾಸಗಿ ಶಾಲೆಗಳು ಶುಲ್ಕ ನೀಡಿ ಪಠ್ಯ ಪುಸ್ತಕ ಹಾಗೂ ಸಮವಸ್ತ್ರವನ್ನು ತೆಗೆದುಕೊಂಡು ಹೋಗಿ ಎಂದು ಪೋಷಕರಿಗೆ ಸೂಚನೆ ನೀಡಿದೆ. ಶಾಲಾ ಮುಖ್ಯ ಶಿಕ್ಷಕರು ಹಾಗೂ ಕೆಲ ವಿದ್ಯಾರ್ಥಿಗಳಿಗೆ ತರಗತಿ ಶಿಕ್ಷಕರೇ ಕರೆ ಮಾಡಿ ಶುಲ್ಕ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎನ್ನುವ ಆರೋಪಗಳು ಪೋಷಕರಿಂದ ಕೇಳಿಬಂದಿದೆ.
ಇಷ್ಟು ಬೇಗ ಸಮವಸ್ತ್ರ ಖರೀದಿ ಏಕೆ..?
ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಸರ್ಕಾರ ಶಾಲೆಗಳ ಆರಂಭಕ್ಕೆ ಮುಂದಾಗಿಲ್ಲ. ಆದ್ರೆ ಖಾಸಗಿ ಶಾಲೆಗಳು ಮಾತ್ರ ಪಠ್ಯ ಪುಸ್ತಕ, ಸಮವಸ್ತ್ರ ಎಂದು ಶುಲ್ಕ ವಸೂಲಿಗೆ ಮುಂದಾಗಿದೆ. ಒಂದು ವೇಳೆ ಇಲ್ಲಿನ ಖಾಸಗಿ ಶಾಲೆಗಳು ಓಪನ್ ಆದ್ರೂ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಅನುಮಾನ.
ಈಗಾಗಲೇ ವಿಟ್ಲದಲ್ಲಿ 10 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಓರ್ವ ಸೋಂಕಿಗೆ ಬಲಿಯಾಗಿದ್ದಾನೆ. ಈ ನಡುವೆ ಶಾಲೆಯ ಅರ್ಧ ಕಿಲೋಮೀಟರ್ ದೂರದಲ್ಲಿ ಸೋಂಕು ಪತ್ತೆಯಾಗಿದೆ. ಇಷ್ಟೇ ಅಲ್ಲ ದೂರದ ಹಳ್ಳಿಗಳಿಂದ, ಕೇರಳದ ಗಡಿ ಭಾಗಗಳಿಂದಲೂ ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಾರೆ. ಹೀಗಿರುವಾಗ ಈ ಖಾಸಗಿ ಶಾಲೆ ವಿದ್ಯಾರ್ಥಿಗಳ ಮೇಲೆ ಯಾಕೆ ಒತ್ತಡ ಹಾಕುತ್ತಿದೆ ಎನ್ನುವುದು ಪೋಷಕರ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಅನ್ನೋದು ಪೋಷಕರ ಒತ್ತಾಯ.