ಕಾರವಾರ : ಶಿರೂರು ರಾಷ್ಟ್ರೀಯ ಹೆದ್ದಾರಿ ಬಳಿ ಉಂಟಾದ ಗುಡ್ಡಕುಸಿತದಿಂದ ನಾಪತ್ತೆಯಾಗಿರುವವರಿಗಾಗಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿತ ದುರಂತದಲ್ಲಿ ನಾಪತ್ತೆಯಾಗಿರುವ ಮೂವರು ಇನ್ನು ಸಿಕ್ಕಿಲ್ಲ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಡ್ರೋಣ್, ಹೆಲಿಕಾಪ್ಟರ್, ಮುಳುಗು ತಜ್ಞರು ಸೇರಿ ಹಲವರು ಕಳೆದ 13 ದಿನಗಳಿಂದ ಶೋಧ ಕಾರ್ಯಚರಣೆ ನಡೆಸಿದರೂ ಸಹ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ಭೂ ಕುಸಿತದಿಂದ ಕಾಣೆಯಾದ ಕೇರಳ ಮೂಲದ ಅರ್ಜುನ್, ಶಿರೂರಿನ ಜಗನ್ನಾಥ ನಾಯ್ಕ, ಗಂಗೆ ಕೊಳ್ಳದ ಲೋಕೇಶ್‌ಗಾಗಿ ಗಂಗಾವಳಿ ನದಿಗೆ ಮುಳುಗು ತಜ್ಞರ ತಂಡ ಇಳಿದಿತ್ತು. ನೌಕಾದಳ, ಭೂಸೇನೆ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಅಗ್ನಿಶಾಮಕ ದಳ, ಹೆಸ್ಕಾಂ ಹಾಗೂ ಈಶ್ವರ್ ಮಲ್ಪೆ ಅವರ ತಂಡ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಆಲದ ಮರದ ದಿಮ್ಮಿ, ವಿದ್ಯುತ್ ಕಂಬ, ತಂತಿಗಳನ್ನು ಮುಳುಗು ತಜ್ಞರು ಪತ್ತೆಹಚ್ಚಿದ್ದಾರೆ. ಆದರೆ ಲಾರಿ ಹಾಗೂ ಕಾಣೆಯಾದವರ ಮೃತದೇಹಗಳು ಪತ್ತೆಯಾಗಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ದೊಡ್ಡ ಆಲದ ಮರ, ಕಲ್ಲು, ಮಣ್ಣು, ಮನೆಯ ಸಾಮಗ್ರಿಗಳು, ಮರದ ದಿಮ್ಮಿಗಳು ಸೇರಿ ಗಂಗಾವಳಿ ನದಿಯಲ್ಲಿ ಸೇರಿ ದ್ವೀಪವೇ ಸೃಷ್ಟಿಯಾಗಿದ್ದು, ಅದರಡಿ ಲಾರಿ ಹಾಗೂ ನಾಪತ್ತೆಯಾದವರ ದೇಹಗಳು ಸಿಲುಕಿರುವ ಸಾಧ್ಯತೆ ಇದ್ದು, ಅದನ್ನು ಹುಡುಕುವುದು ಹೇಗೆ ಎಂಬುದು ಜಿಲ್ಲಾಡಳಿತಕ್ಕೆ ದಿಕ್ಕು ತೋಚದಂತಾಗಿದೆ. ಇದರಿಂದ ಭಾನುವಾರ ಗಂಗಾವಳಿ ನದಿಯಲ್ಲಿನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಯಿತು.
ಒಂದೆಡೆ ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರಿಂದ ನದಿಯೊಳಗೆ ಹೋಗಲು ಸ್ಕೂಬಾ ಡೈ ತಂಡಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಶೋಧ ಕಾರ್ಯಾಚರಣೆ ಯಶಸ್ವಿಯಾಗದಿರುವುದಕ್ಕೆ ಮುಳುಗು ತಜ್ಞ ಈಶ್ವರ ಮಲ್ಪೆ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಈ ಹಿಂದೆ ಮಾಡಿದ ಬಹಳಷ್ಟು ಕಾರ್ಯಾಚಾರಣೆ ಯಶಸ್ಸು ಆಗಿದೆ. ಆದ್ರೆ, ಇಂದಿನ ಶೋಧ ಕಾರ್ಯಾಚರಣೆ ಯಶಸ್ವಿಯಾಗದಿರುವುದರಿಂದ ದುಃಖವಾಗಿದೆ. ನೀರಿನ ವೇಗ ಹೆಚ್ಚಾಗಿರುವುದರಿಂದ ನದಿ ಒಳಗೆ ಇರಲು ಆಗಲಿಲ್ಲ. ಕೆಸರು ನೀರು ಇರುವ ತನಕ ಕಾರ್ಯಾಚರಣೆ ಮಾಡುವುದು ಕಷ್ಟ. ನಾನು ನದಿ ಒಳಗೆ ಎಷ್ಟೇ ಇಳಿದರೂ ಸರಿಯಾಗಿ ಏನೂ ಕಾಣಲಿಲ್ಲ. ನದಿ ನೀರು ಕೆಸರುಮಯವಾಗಿರುವುದರಿಂದ ಸರಿಯಾಗಿ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.