Wednesday, June 24, 2026
spot_imgspot_img
spot_imgspot_img

ತಾಯಿಯ ಜತೆ ಬಟ್ಟೆ ಖರೀದಿಗೆಂದು ಬಂದ ಮಗು ನಾಪತ್ತೆ; ಬಾವಿಯಲ್ಲಿ ಶವವಾಗಿ ಪತ್ತೆ!

- Advertisement -
- Advertisement -

ಶಿರ್ವ: ಅದಮಾರಿನಿಂದ ಬಟ್ಟೆ ಖರೀದಿಗೆಂದು ತಾಯಿಯ ಜತೆ ಮುದರಂಗಡಿಗೆ ಬಂದು ನಾಪತ್ತೆಯಾಗಿದ್ದ ಹೆಣ್ಣು ಮಗು ಬಟ್ಟೆ ಅಂಗಡಿ ಹಿಂಬದಿಯ ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಮುದರಂಗಡಿ ಪೇಟೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಅದಮಾರು ವಾಜಪೇಯಿ ಕಾಲನಿಯ ನಿವಾಸಿ ಕೃಷ್ಣ- ಜಯಲಕ್ಷ್ಮಿ ದಂಪತಿ ಪುತ್ರಿ 2 ವರ್ಷ 9 ತಿಂಗಳ ಪ್ರಾಯದ ಮಗು ಪ್ರಿಯಾಂಕಾ ಮೃತಪಟ್ಟಾಕೆ.


ಮೃತ ಬಾಲಕಿ ಮತ್ತು ಆಕೆಯ ತಾಯಿ ಬಟ್ಟೆ ಖರೀದಿಗೆಂದು ಅದಮಾರಿನಿಂದ ರಿಕ್ಷಾದಲ್ಲಿ 4-30ರ ವೇಳೆಗೆ ಮುದರಂಗಡಿಯ ಬಟ್ಟೆ ಅಂಗಡಿಗೆ ಬಂದಿದ್ದರು. ತಾಯಿ ಬಟ್ಟೆ ಖರೀದಿಸುವಾಗ ಅಂಗಡಿಯ ಒಳಗೆ ಮತ್ತು ಹೊರಗೆ ಆಟವಾಡುತ್ತಿದ್ದ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಗಾಬರಿಗೊಂಡ ತಾಯಿ ಮತ್ತು ಅಂಗಡಿ ಮಾಲಕರು, ಸಿಬ್ಬಂದಿ, ಸ್ಥಳೀಯರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲ. ಶಿರ್ವ ಪೊಲೀಸರಿಗೆ ಮಾಹಿತಿ ನೀಡಲಾಯಿತು.


ಮಗು ನಾಪತ್ತೆಯಾದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಎಲ್ಲೆಡೆ ಹುಡುಕಾಟ ನಡೆಸಲಾಗಿತ್ತು. ಬಟ್ಟೆ ಅಂಗಡಿ ಸಿಬ್ಬಂದಿ ಮತ್ತೋರ್ವ ಮಹಿಳೆ ಅಂಗಡಿ ಸಮೀಪದ ಬಾವಿಯಲ್ಲಿ ಇಣುಕಿದಾಗ ಮಗುವಿನ ಕುತ್ತಿಗೆಯಲ್ಲಿದ್ದ ನೀಲಿ ಬಣ್ಣದ ಬ್ಯಾಗ್‌ ನೀರಿನಲ್ಲಿರುವುದು ಕಂಡುಬಂದಿತ್ತು. ತತ್‌ಕ್ಷಣ ಶಿರ್ವ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಕೆಲವರು ಹುಡುಕಾಟ ನಡೆಸಿದರು. ಶವ ಸಿಗದಿದ್ದಾಗ ಮುಳುಗು ತಜ್ಞ ದೆಂದೂರು ಕಟ್ಟೆಯ ಅಶೋಕ್‌ ಶೆಟ್ಟಿ ಸುಮಾರು 25 ಅಡಿ ನೀರಿರುವ ಬಾವಿಗಿಳಿದು ಶವವನ್ನು ಮೇಲಕ್ಕೆತ್ತಿದ್ದಾರೆ.


ಅಂಗಡಿಯ ಹೊರಗೆ ಆಟವಾಡುತ್ತಿದ್ದ ಮಗು ಕಟ್ಟಡದ ಬದಿಯ ಓಣಿಯಲ್ಲಿ ಹೋಗಿ ಕಟ್ಟಡದ ಹಿಂಬದಿಯಲ್ಲಿದ್ದ ಕಡಿಮೆ ಎತ್ತರದ ಆವರಣವಿರುವ ಸುಮಾರು 65 ಅಡಿ ಆಳದ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಶಿರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

- Advertisement -

Related news

error: Content is protected !!