




ಶಿವಮೊಗ್ಗ: ಶಿಕಾರಿಪುರ ತಾಲೂಕಿನ ತಡಸನಹಳ್ಳಿ, ಅಡಗಂಟಿ, ಮುತ್ತಗಿ ಗ್ರಾಮದಲ್ಲಿ ಒಂದೇ ದಿನ ಚಿರತೆ ಮೂವರ ದಾಳಿ ಮಾಡಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.
ಅಡಗಂಟಿ ಗ್ರಾಮದ ಸುದೀಪ್ ಎಂಬವರು ಸಂಜೆ ಮುತ್ತಗಿ ಗ್ರಾಮ ಸಮೀಪದ ಮೆಕ್ಕೆಜೋಳದ ಜಮೀನಿಗೆ ಮೇವು ತರಲು ಹೋಗಿದ್ದಾಗ ಚಿರತೆ ದಿಢೀರ್ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಡಸನಹಳ್ಳಿ ಗ್ರಾಮದ ಮುತ್ತಣ್ಣ ಎಂಬವರು ಶನಿವಾರ ಬೆಳಗ್ಗೆ ಗದ್ದೆಗೆ ನೀರು ಬಿಡುವುದಕ್ಕೆ ತೆರಳಿದ್ದಾಗ ಚಿರತೆ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನೂ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಸಂಜೆ ತಡಸನಹಳ್ಳಿ, ಅಡಗಂಟಿ ಗ್ರಾಮದ ನಡುವಿನ ಮುಖ್ಯರಸ್ತೆಯಲ್ಲಿ ಬೈಕಿನಲ್ಲಿ ತೆರಳುತ್ತಿದ್ದ ಹೂವ್ಯನಾಯ್ಕ ಎಂಬುವರ ಮೇಲೂ ಚಿರತೆ ದಾಳಿ ನಡೆಸಲು ಯತ್ನಿಸಿದ್ದು, ಪ್ರಥಮ ಚಿಕಿತ್ಸೆ ಪಡೆದು ಅವರು ಮನೆಗೆ ಮರಳಿದ್ದಾರೆ ಎನ್ನಲಾಗಿದೆ.
ತಡಸನಹಳ್ಳಿ, ಅಡಗಂಟಿ ಗ್ರಾಮದ ಜಮೀನಿನಲ್ಲಿ, ಮುತ್ತಗಿ ಕಿರು ಅರಣ್ಯ ಸೇರಿ ಮೂರು ಕಡೆ ಚಿರತೆ ಸೆರೆಗೆ ಬೋನು ಇರಿಸಲಾಗಿದ್ದು, ಚಿರತೆ ಮನುಷ್ಯನ ಮೇಲೆ ದಾಳಿ ಮಾಡುವುದು ಕಡಿಮೆ. ಅದು ಯಾವುದಾದರೂ ರೋಗದಿಂದ ಬಳಲುತ್ತಿರಬಹುದು ಅಥವಾ ವಿಚಲಿತವಾಗಿರುವ ಕಾರಣಕ್ಕೆ ಮನುಷ್ಯರ ಮೇಲೆ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ವಲಯ ಅರಣ್ಯಾಧಿಕಾರಿ ಜಾವಿದ್ ಅಂಗಡಿ ತಿಳಿಸಿದ್ದಾರೆ.
ಚಿರತೆ ದಾಳಿಯಿಂದಾಗಿ ಜನ ಆತಂಕಕ್ಕೊಳಗಾಗಿದ್ದು, ಜಮೀನಿಗೆ ತೆರಳುವುದಕ್ಕೆ ಹೆದರುತ್ತಿದ್ದಾರೆ. ಕೂಡಲೇ ಚಿರತೆ ಸೆರೆ ಹಿಡಿಯಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಜಮೀನಿಗೆ ತೆರಳುವ ಸಮಯದಲ್ಲಿ ರೈತರು ಎಚ್ಚರಿಕೆ ವಹಿಸಬೇಕು ಎಂದು ಅರಣ್ಯ ಇಲಾಖೆ ಸೂಚಿಸಿದೆ ಎಂಬುದಾಗಿ ತಿಳಿದುಬಂದಿದೆ.








