

ಮಂಗಳೂರು: ಕೋಟೆಕಾರು ದರೋಡೆ ಪ್ರಕರಣದ ಓರ್ವ ಆರೋಪಿಯ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ಮಂಗಳವಾರ ಮಧ್ಯಾಹ್ನ ವರದಿಯಾಗಿದೆ.ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣದಲ್ಲಿನ ಆರೋಪಿ ಮಣಿವಣ್ಣನ್ ಎಂಬಾತನ ಮೇಲೆ ಪೊಲೀಸರು ಗುಂಡು ಹಾರಿಸಿದರುವುದಾಗಿ ವರದಿಯಾಗಿದೆ.ಜ.17ರಂದು ಕೋಟೆಕಾರಿನ ವ್ಯವಸಾಯ ಸಹಕಾರಿ ಸಂಘಕ್ಕೆ ಶಸ್ತ್ರಾಸ್ತ್ರ, ಬಂದೂಕುಗಳೊಂದಿಗೆ ಸುಮಾರು 6ಮಂದಿಯ ತಂಡ ಹಾಡಹಗಲೇ ದಾಳಿ ಮಾಡಿ ದರೋಡೆಗೈದು ಪರಾರಿಯಾಗಿತ್ತು. ದರೋಡೆಕೋರರನ್ನು ಬೆನ್ನುಹತ್ತಿದ್ದ ಪೊಲೀಸರು, ತಮಿಳುನಾಡಿನ ತಿರುನಲ್ವೇಲಿ ಎಂಬಲ್ಲಿ ಮಣಿವಣ್ಣನ್ ಸೇರಿದಂತೆ ಮೂವರನ್ನು ಬಂಧಿಸಿ ಮಂಗಳೂರಿಗೆ ಕರೆತಂದಿತ್ತು.
ಇಂದು ಸಿಸಿಬಿ ಪೊಲೀಸರು ಹಾಗೂ ಉಳ್ಳಾಲ ಪೊಲೀಸರು ಜಂಟಿಯಾಗಿ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಣಿವಣ್ಣನ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸಿಸಿಬಿ ಇನ್‌ಸ್ಪೆಕ್ಟರ್ ರಫೀಕ್ ಅವರು ಆತನ ಕಾಲಿಗೆ ಗುಂಡು ಹಾರಿಸಿ ಮತ್ತೆ ವಶಕ್ಕೆ ಪಡೆದುಕೊಂಡರು ಎಂದು ತಿಳಿದು ಬಂದಿದೆ.ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿಯನ್ನು ಪೊಲೀಸರು ನಗರದ ವೆಸ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ತಿಳಿದುಬಂದಿದೆ.