




ಗಾಂಧಿನಗರ: ಮಗಳನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಸೂರತ್ ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಮೇ 18ರಂದು ಕಡೋದರ ಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಪ್ರಕರಣ ಸಂಬಂಧ ಪತ್ನಿ ರೇಖಾ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಘಟನೆ ನಡೆದು 2 ದಿನಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ರಾಮಾನುಜ (45) ಎಂದು ಗುರುತಿಸಲಾಗಿದೆ. ರಾಮಾನುಜ ತನ್ನ ಕುಟುಂಬದ ಜೊತೆ ಸೂರತ್‍ನ ಸತ್ಯ ನಗರ ಸೊಸೈಟಿಯಲ್ಲಿ ಬಾಡಿಗೆ ಅಪಾರ್ಟ್ ಮೆಂಟ್‍ನಲ್ಲಿ ವಾಸಿಸುತ್ತಿದ್ದನು. ಮಗಳು ಟೆರೇಸ್ ಮೇಲೆ ಮಲಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಪತ್ನಿಯೊಂದಿಗೆ ರಾಮಾನುಜ ಜಗಳವಾಡಿದ್ದಾನೆ. ಈ ಜಗಳ ತಾರಕಕ್ಕೇರಿ ಆರೋಪಿ ತಾಳ್ಮೆ ಕಳೆದುಕೊಂಡಿದ್ದು, ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರಿ 11.20 ರ ಸುಮಾರಿಗೆ ರಾಮಾನುಜ ಮೊದಲು ತನ್ನ ಮಕ್ಕಳ ಮುಂದೆಯೇ ಪತ್ನಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಕ್ಕಳು ತಡೆಯಲು ಪ್ರಯತ್ನಿಸಿದ್ದಾರೆ. ಆಗ ಮಕ್ಕಳ ಮೇಲೂ ಹಲ್ಲೆ ಮಾಡಲು ರಾಮಾನುಜ ಯತ್ನಿಸಿದ್ದಾನೆ. ಹೀಗೆ ಸಿಟ್ಟಿನಲ್ಲಿದ್ದ ರಾಮಾನುಜನ ಕೈಗೆ ಮಗಳು ಸಿಕ್ಕಿದ್ದಾಳೆ. ಮಗಳನ್ನು ಗೋಡೆಗೆ ದಬ್ಬಿ ಅನೇಕ ಬಾರಿ ಚಾಕುವಿನಿಂದ ಇರಿದಿದ್ದಾನೆ.
ತನ್ನ ಜೀವವನ್ನು ಉಳಿಸಿಕೊಳ್ಳಲು ತಂದೆಯ ಹಿಡಿತದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ, ಪಕ್ಕದಲ್ಲಿದ್ದ ಕೋಣೆಯೊಳಗೆ ಆಕೆ ನುಗ್ಗಿದಳು. ಅವಳನ್ನು ಹಿಂಬಾಲಿಸಿದ ರಾಮಾನುಜ ಚಾಕುವಿನಿಂದ ಮತ್ತೆ ಚುಚ್ಚಿದ್ದಾನೆ. ಮಗಳ ಮೇಲೆ ಮಾರಣಾಂತಿಕ ಹಲ್ಲೆಯ ಬಳಿಕವೂ ರಾಮಾನುಜನು ತನ್ನ ಪತ್ನಿಗೆ ಹಾನಿ ಮಾಡಲು ನಿರ್ಧರಿಸಿ ಟೆರೇಸ್ ಮೇಲೆ ಹೋದನು. ತಮ್ಮ ತಾಯಿಯನ್ನು ರಕ್ಷಿಸುವ ಸಲುವಾಗಿ ಮಕ್ಕಳು ಪ್ರಧ್ಯಪ್ರವೇಶ ಮಾಡಿ ರಾಮಾನುಜನ ಹಲ್ಲೆಗೊಳಗಾಗಿ ಅವರೂ ಗಾಯಗೊಂಡಿದ್ದಾರೆ.
ಈ ಬಗ್ಗೆ ಸೂರತ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಕೂಡಲೇ ಎಚ್ಚೆತ್ತ ಪೊಲೀಸರು ರಾಮಾನುಜನನ್ನು ಬಂಧಿಸಿ, ಕೊಲೆಗೆ ಬಳಸಿದ್ದ ಆಯುಧವನ್ನೂ ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ ಮತ್ತು ಆತನ ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಸೇರಿದಂತೆ ಐಪಿಸಿಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕರಣದ ಪ್ರಮುಖ ತನಿಖಾಧಿಕಾರಿ ಇನ್‍ಸ್ಪೆಕ್ಟರ್ ಆರ್‍ಕೆ ಪಟೇಲ್ ತಿಳಿಸಿದ್ದಾರೆ. ಅಧಿಕಾರಿಗಳು ಸಂತ್ರಸ್ತೆ ಮತ್ತು ದೂರುದಾರರಾದ ರೇಖಾ ಅವರಿಂದ ಹೇಳಿಕೆಗಳನ್ನು ತೆಗೆದುಕೊಂಡಿದ್ದಾರೆ. ಇತ್ತ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.