Friday, July 24, 2026
spot_imgspot_img
spot_imgspot_img

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: 26 ದಿನಗಳ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಸೋನಂ ವಾಂಗ್ಚುಕ್

- Advertisement -
- Advertisement -

ತಡರಾತ್ರಿ ಕೇಂದ್ರದಿಂದ ಮನವೊಲಿಕೆ ಸಕ್ಸಸ್

ಆಸ್ಪತ್ರೆಗೆ ತೆರಳಿ ಜ್ಯೂಸ್‌ ಕುಡಿಸಿದ ಸಚಿವರು

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ 26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಹೋರಾಟಗಾರ ಸೋನಂ ವಾಂಗ್ಚುಕ್ ಗುರುವಾರ ತಡರಾತ್ರಿ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ

ವಾಂಗ್ಚುಕ್ ಅವರು ಚಿಕಿತ್ಸೆ ಪಡೆಯುತ್ತಿರುವ ಗುರುಗ್ರಾಮದ ಮೇದಾಂತ ಮೆಡಿಸಿಟಿ ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಸಚಿವ ಜೆ.ಪಿ ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಅವರು ವಾಂಗ್ಚುಕ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾಂಗ್ಚುಕ್ ಅವರಿಗೆ ಇಬ್ಬರೂ ಸಚಿವರು ಜ್ಯೂಸ್ ಕುಡಿಸುವ ಮೂಲಕ ನಿರಶನ ಅಂತ್ಯವಾಗಿದೆ.

ಜೂ.28ರಿಂದ ಸೋನಂ ವಾಂಗ್ಚುಕ್ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದರು. ನನ್ನ ಉಪವಾಸ ಕೊನೆಗೊಳಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಎಲ್ಲರಿಗೂ ಧನ್ಯವಾದ ಎಂದು ಜೆ.ಪಿ ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಅವರ ಕೈ ಹಿಡಿದು ಸೋನಂ ವಾಂಗ್ಚುಕ್ ಹೇಳಿದ್ದಾರೆ. ಈ ವೇಳೆ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಕೂಡ ಉಪಸ್ಥಿತರಿದ್ದರು. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾನು ಉಪವಾಸ ಕೈಬಿಡಬೇಕಾದರೆ ಕೇಂದ್ರ ಸರ್ಕಾರ ಸಂಸತ್ ಚಲೋ ಹೋರಾಟ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಬುಧವಾರವಷ್ಟೇ ವಾಂಗ್ಚುಕ್ ಷರತ್ತು ವಿಧಿಸಿದ್ದರು. ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಕೇಂದ್ರ ಸಚಿವರು, ಸಂಸತ್ ಚಲೋದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಲಿಖಿತ ಭರವಸೆ ನೀಡಿದ್ದಾರೆ. ಈ ಹಿನ್ನೆಲೆ ವಾಂಗ್ಚುಕ್ ಅವರು ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸೋನಂ ವಾಂಗ್ಚುಕ್ ಖುದ್ದು ಪೋಸ್ಟ್ ಹಾಕಿ, ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಸಂದೇಶ ರವಾನಿಸಿದ್ದಾರೆ. ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಡಾ. ಜಿತೇಂದ್ರ ಸಿಂಗ್ ಮತ್ತು ಲೇಹ್ ಲಡಾಖ್‌ನ ಅಪೆಕ್ಸ್ ಬಾಡಿ ಹಿರಿಯ ನಾಯಕರ ಸಮ್ಮುಖದಲ್ಲಿ 26 ದಿನಗಳ ನಂತರ ನಾನು ಅಂತಿಮವಾಗಿ ನನ್ನ ಉಪವಾಸವನ್ನು ಕೊನೆಗೊಳಿಸಿದ್ದೇನೆ. ರಾಜಕೀಯ ಪಕ್ಷಗಳ 65 ಸಂಸತ್ ಸದಸ್ಯರು ಉಪವಾಸವನ್ನು ಕೊನೆಗೊಳಿಸುವಂತೆ ಒತ್ತಾಯಿಸುವ ಪತ್ರಗಳಿಗೆ ಸಹಿ ಹಾಕಿದ್ದರು. ವಿವಿಧ ಪರಿಸ್ಥಿತಿಗಳ ಕುರಿತು ಮತ್ತು ದೇಶದಲ್ಲಿ ಸಂಭವನೀಯ ಹಿಂಸಾಚಾರದ ದೃಷ್ಟಿಯಿಂದ ದೀರ್ಘ ಮಾತುಕತೆಗಳ ನಂತರ ಈ ನಿರ್ಧಾರ ಮಾಡಲಾಗಿದೆ. ನಾನು ಶೀಘ್ರದಲ್ಲೇ ಪ್ರತ್ಯೇಕ ವೀಡಿಯೋದಲ್ಲಿ ಪರಿಸ್ಥಿತಿಗಳನ್ನು ವಿವರವಾಗಿ ವಿವರಿಸುತ್ತೇನೆ. ಈ ಮಧ್ಯೆ, ಎಲ್ಲಿಯೂ ಯಾವುದೇ ರೀತಿಯ ಹಿಂಸಾಚಾರಕ್ಕೆ ಅವಕಾಶ ನೀಡದಿರುವ ಬಗ್ಗೆ, ನೀವೆಲ್ಲರೂ ಬಹಳ ಜಾಗರೂಕರಾಗಿರಬೇಕೆಂದು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.

ಸೋನಂ ವಾಂಗ್ಚುಕ್‌ ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ವಾಂಗ್ಚುಕ್‌ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ, ವಾಂಗ್ಚುಕ್‌ ವೈದ್ಯರ ಸಲಹೆಯನ್ನು ಅನುಸರಿಸಿ ಬೇಗ ಮರಳಿ ಮೊದಲಿನಂತಾಗಲಿ. ವೈದ್ಯರ ಸಲಹೆಯಂತೆ ಸೋನಂ ಜೀ ತಮ್ಮ ದಿನಚರಿಯನ್ನು ಅನುಸರಿಸುವಂತೆ ಮತ್ತು ಸಾಧ್ಯವಾದಷ್ಟು ಬೇಗ ತಮ್ಮ ಹಳೆಯ ತೂಕವನ್ನು ಮರಳಿ ಪಡೆಯುವಂತೆ ನಾನು ಕೋರುತ್ತೇನೆ. ಸೋನಂ ಜೀ ಆರೋಗ್ಯವಾಗಿರಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!