ಬೆಂಗಳೂರು: ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಸಚಿವ ಸುರೇಶ್ ಕುಮಾರ್, ಎಸ್ಎಸ್ ಎಲ್ ಸಿ ಪರೀಕ್ಷೆ ಮತ್ತು ಮೌಲ್ಯಮಾಪನ ಸರ್ಕಾರದ ಪಾಲಿಗೆ ಸವಾಲಿನ ಕೆಲಸವಾಗಿತ್ತು. ಈ ಬಾರಿ 8,11,050 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.ಈಗ ಮೊಬೈಲ್ಗಳಲ್ಲಿ, ವೆಬ್ಸೈಟ್ಗಳಲ್ಲಿ ಮತ್ತು ನಾಳೆ ಆಯಾ ಶಾಲೆಗಳಲ್ಲಿ ಫಲಿತಾಂಶದ ವರದಿ ಪ್ರಕಟವಾಗಲಿದೆ ಎಂದರು.

5,82,360 ವಿದ್ಯಾರ್ಥಿಗಳು ಉತ್ತೀರ್ಣ:
ಈ ವರ್ಷ 8,11,050 ವಿದ್ಯಾರ್ಥಿಗಳಲ್ಲಿ 5,82,360 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಈ ಬಾರಿ 71.80 ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷ 73.70 ಫಲಿತಾಂಶ ಬಂದಿತ್ತು.
8,48,203 ವಿದ್ಯಾರ್ಥಿಗಳು ನೋಂದಣಿ ಮಾಡಿದ್ರು.19,086 ಹಾಜರಾತಿ ಕಡಿಮೆ ಹಿನ್ನೆಲೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. 18,067 ಕೊರೊನಾ ಹಿನ್ನೆಲೆ ಪರೀಕ್ಷೆ ಬರೆದಿಲ್ಲ.

ಈ ಬಾರಿ ಹೆಣ್ಣು ಮಕ್ಕಳೇ ಮೇಲುಗೈ:
ಈ ಬಾರಿಯೂ ಹೆಣ್ಣು ಮಕ್ಕಳೇ ಫಲಿತಾಂಶದಲ್ಲಿ ಮುಂದೆ ಇದ್ದಾರೆ. ವಿದ್ಯಾರ್ಥಿನಿಯರ ಶೇಕಡಾವಾರು77.74 ಇದ್ದರೆ, ವಿದ್ಯಾರ್ಥಿಗಳ ಶೇಕಡಾವಾರು ಫಲಿತಾಂಶ 66.41ರಷ್ಟು ಇದೆ.

501 ಸರ್ಕಾರಿ ಶಾಲೆಗಗಳಿಗೆ 100 ಪರ್ಸೆಂಟ್ ಫಲಿತಾಂಶ:
6 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದಿದ್ದಾರೆ. ಈ ಬಾರಿ ನಾವು ಜಿಲ್ಲೆಗಳಿಗೆ ರ್ಯಾಂಕ್ ಮಾಡಿಲ್ಲ. ಬದಲಿಗೆ ಗ್ರೇಡ್ ವೈಸ್ ಮಾಡಿದ್ದೇವೆ.501 ಸರ್ಕಾರಿ ಶಾಲೆಗಳು 100 ಪರ್ಸೆಂಟ್ ಫಲಿತಾಂಶ ಪಡೆದಿವೆ. 62 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿವೆ.
ನಿಮ್ಮ ಮಕ್ಕಳು ಒಂದೊಮ್ಮೆ ಕಡಿಮೆ ಅಂಕ ಪಡೆದಿದ್ದರೆ ಹೀಯಾಳಿಸಬೇಡಿ. ಬೇರೊಂದು ಮಗು ಜೊತೆ ಹೋಲಿಕೆ ಮಾಡಬೇಡಿ ಎಂದು ಪೋಷಕರಲ್ಲಿ ಮನವಿ ಮಾಡಿದರು.

ಆಗಸ್ಟ್ 14 ರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಆರಂಭ:
ಆಗಸ್ಟ್ 14 ರಿಂದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಆರಂಭವಾಗುತ್ತದೆ.
ಈ ಬಾರಿ ಪರೀಕ್ಷೆ ಬರೆಯದ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಬಹುದು. ಆ ದಿನಾಂಕವನ್ನು ಎರಡು ದಿನಗಳಲ್ಲಿ ಘೋಷಿಸಲಾಗುವುದು. ಈಗಾಗಲೇ ಸಲ್ಲಿಸಿರುವ ಅರ್ಜಿಯನ್ನೂ ಪರಿಗಣಿಸಲಾಗುವುದು.
ಕೇಂದ್ರ ಸರ್ಕಾರ ಸೆಪ್ಟೆಂಬರ್ ನಂತರ ಶಾಲೆಗಳನ್ನು ತೆರೆಯಲು ಚಿಂತಿಸುತ್ತಿದೆ, ಕೇಂದ್ರದ ನಿರ್ಧಾರ ನೋಡಿಕೊಂಡು ರಾಜ್ಯ ಸರ್ಕಾರ ಈ ಕುರಿತು ಚಿಂತಿಸಲಿದೆ ಎಂದು ತಿಳಿಸಿದರು.
