ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯ ಶವ ಕೆರೆಯಲ್ಲಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣ ಹೊರವಲಯದ ಕೊಂಡವಾರಪಲ್ಲಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಈರೇನಹಳ್ಳಿ ಗ್ರಾಮದ ನಿವಾಸಿ ಶಂಕರ್ ಹಾಗೂ ನಾಗಮ್ಮ ದಂಪತಿಯ ಪುತ್ರಿ ನಯನ (15) ಮೃತ ವಿದ್ಯಾರ್ಥಿನಿ. ಶನಿವಾರ ಗ್ರಾಮದಿಂದ ಚಿಕ್ಕಬಳ್ಳಾಪುರದ ಖಾಸಗಿ ಶಾಲೆಗೆ ಹೋಗುವುದಾಗಿ ಹೇಳಿದ ವಿದ್ಯಾರ್ಥಿನಿ ಶಾಲೆಗೆ ಹೋಗಿಲ್ಲ. ಬದಲಾಗಿ ಚಿಕ್ಕಬಳ್ಳಾಪುರ ನಗರದಿಂದ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಬಾಗೇಪಲ್ಲಿಗೆ ತೆರಳಿ ಅಲ್ಲಿಂದ ಬಾಗೇಪಲ್ಲಿ ಪಟ್ಟಣ ಹೊರವಲಯದ ಕೊಂಡ್ರವಾರಪಲ್ಲಿ ಕೆರೆ ಬಳಿ ಹೋಗಿದ್ದಾಳೆ.
ಕೆರೆಯ ದಡದಲ್ಲಿ ವಿದ್ಯಾರ್ಥಿನಿಯ ಶೂ, ಬ್ಯಾಗ್ ಪತ್ತೆಯಾಗಿದ್ದು ಕೆರೆಯಲ್ಲಿ ವಿದ್ಯಾರ್ಥಿನಿ ಶವ ತೇಲಿ ಬಂದಿದೆ. ಇದನ್ನು ಗಮನಿಸಿದ ಸ್ಥಳೀಯ ಕುರಿಗಾಹಿಗಳು ಪೊಲೀಸರಿಗೆ ವಿಷಯವನ್ನು ತಿಳಿಸಿದ್ದಾರೆ. ಬ್ಯಾಗ್ ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿನಿಯ ವಿಳಾಸ ತಿಳಿದುಬಂದಿದೆ. ಬಳಿಕ ಪೋಷಕರು ಹಾಗೂ ಶಾಲೆಗೆ ಕರೆ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಮೃತದೇಹವನ್ನು ಬಾಗೇಪಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೋ ಎಂಬುದು ಇನ್ನೂ ಖಚಿತವಾಗಿಲ್ಲ. ಆಕೆಯ ಪೋಷಕರು ಸಹ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ವಿದ್ಯಾರ್ಥಿನಿ ಚಿಕ್ಕಬಳ್ಳಾಪುರದಿಂದ ಬಾಗೇಪಲ್ಲಿಗೆ ಹೋಗಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.