



ಬೆಂಗಳೂರು: ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ಮಧ್ಯಪ್ರವೇಶ ಮಾಡಿಲ್ಲ. ಆದರೆ ಚುನಾವಣಾ ಆಯೋಗ ಈ ಅಭಿಯಾನವನ್ನು ನಡೆಸುತ್ತಿರುವ ರೀತಿಯ ಬಗ್ಗೆ ಮಾತ್ರ ನಮಗೆ ಭಿನ್ನಾಭಿಪ್ರಾಯ ಇದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪಗಳಾಗಿವೆ ಎಂಬ ವಿಪಕ್ಷಗಳ ಆರೋಪದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಈ ವಿಚಾರದಲ್ಲಿ ಈಗಾಗಲೇ ನ್ಯಾಯಾಲಯದಲ್ಲಿ ವಾದ ಮಾಡಿದ್ದೇವೆ. ಈಗ ಕೋರ್ಟ್ ತೀರ್ಪು ನೀಡಿದೆ. ಎಲ್ಲರಿಗೂ ಮತದಾನದ ಹಕ್ಕು ಸಿಗಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಯಾವುದೇ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ನೀಡದಷ್ಟು ಸಹಕಾರವನ್ನು ನಾವು ನೀಡಿದ್ದೇವೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಾವು ಯಾರೂ ಕೈಹಾಕಿಲ್ಲ” ಎಂದಿದ್ದಾರೆ.
“ಜನರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಬಿಎಲ್‌ಎಗಳನ್ನು ನೇಮಿಸುವ ಅವಕಾಶ ಇದೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. ನಾವು ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದರಿಂದಲೇ ವಿಪಕ್ಷಗಳಿಗೆ ಭಯವಾಗಿದೆ. ಅವರಿಗೆ ಚುನಾವಣಾ ಆಯೋಗದ ಮೇಲೆಯೇ ನಂಬಿಕೆ ಇಲ್ಲ. ಅದಕ್ಕಾಗಿಯೇ ಪ್ರಕ್ರಿಯೆ ರದ್ದು ಮಾಡುವಂತೆ ದೂರು ನೀಡಿದ್ದಾರೆ. ಆದರೆ ಪ್ರಕ್ರಿಯೆ ಮುಂದುವರಿಸಬೇಕೋ ಅಥವಾ ರದ್ದು ಮಾಡಬೇಕೋ ಎಂಬುದು ಚುನಾವಣಾ ಆಯೋಗದ ತೀರ್ಮಾನ” ಎಂದು ತಿಳಿಸಿದರು.
“ಜನರಿಗೆ ಅನುಕೂಲವಾಗುವಂತೆ ಜಾತಿ ಪ್ರಮಾಣ ಪತ್ರ ಹಾಗೂ ವಾಸ ದೃಢೀಕರಣ ಪತ್ರವನ್ನು ಆನ್‌ಲೈನ್ ಮೂಲಕ ಪಡೆಯುವ ವ್ಯವಸ್ಥೆ ಮಾಡಿದ್ದೇವೆ. 2002ರ ಮತದಾರರ ದಾಖಲೆಗಳು ಹಲವರ ಬಳಿ ಇಲ್ಲದ ಕಾರಣ, ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವೂ ಕಲ್ಪಿಸಲಾಗಿದೆ. ಮತದಾನದ ಹಕ್ಕನ್ನು ಉಳಿಸಿಕೊಳ್ಳುವಂತೆ ನಾವು ಜನರಿಗೆ ಮನವಿ ಮಾಡುತ್ತಿದ್ದೇವೆ. ಆದರೆ ಬಡವರು ಹಾಗೂ ಅಲ್ಪಸಂಖ್ಯಾತರಿಗೆ ತೊಂದರೆ ಆಗಬೇಕು ಎಂಬ ಉದ್ದೇಶದಿಂದಲೇ ವಿಪಕ್ಷಗಳು ವಿರೋಧಿಸುತ್ತಿವೆ” ಎಂದು ಅಭಿಪ್ರಾಯಪಟ್ಟಿರುವುದಾಗಿ ತಿಳಿದುಬಂದಿದೆ.








