


ಪ್ರತಿಯೊಬ್ಬ ವ್ಯಕ್ತಿಯ ಓದಿನ ವೇಗ, ಅರ್ಥ ಮಾಡಿಕೊಳ್ಳುವ ರೀತಿ, ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಎಲ್ಲವೂ ಭಿನ್ನ. ಹೀಗಿರುವಾಗ ನಮ್ಮ ನಮ್ಮ ಸಾಮರ್ಥ್ಯ ನಮ್ಮ ನಮ್ಮ ನೆನಪನ್ನು ಕೂಡಾ ನಿರ್ಧರಿಸುತ್ತದೆ. ಆದ್ದರಿಂದ, ಅಧ್ಯಯನಕ್ಕೆ ಸಹಕಾರಿ ಆಗುವ ಕೆಲವೊಂದು ವಿಚಾರಗಳತ್ತ ಕಣ್ಣು ಹಾಯಿಸೋಣವೇ…?
ಓದಿನ ಮೇಲೆ ಪ್ರೀತಿಯಿರಲಿ
ಕಲಿಯುವ ವಿಷಯ ಯಾವುದೇ ಆಗಿರಲಿ ಮೊದಲು ಅದನ್ನು ಪ್ರೀತಿಸುವುದನ್ನು ಕಲಿಯಿರಿ. ಯಾವಾಗ ವಿಷಯದ ಬಗ್ಗೆ ಪ್ರೀತಿ ಇರುವುದೋ ಆಗ ಅದರ ಓದು ಸಲೀಸಾಗುತ್ತದೆ. ‘ಅಯ್ಯೋ ನಂಗೆ ಈ ಗಣಿತ ಅಂದ್ರೆ ಕಷ್ಟ. ಯಾಕಾದ್ರೂ ಇದೆಯೋ…?’ ಎಂಬ ಭಾವನೆ ಮನದಲ್ಲಿ ಹೊಂದಿ ಓದಿಗೆ ತೊಡಗಿದರೆ ಅದು ಅರ್ಥವಾಗುವುದು ಕಷ್ಟವಾಗುತ್ತದೆ, ಕಲಿಯಲು ಹೆಚ್ಚು ಸಮಯ ಬೇಕಾಗುತ್ತದೆ.
ಅರ್ಥ ಮಾಡಿಕೊಂಡು ಓದಿ
ಅದೆಷ್ಟೋ ವಿದ್ಯಾರ್ಥಿಗಳು ಯಾವ ವಿಷಯವನ್ನೇ ಆದರೂ ಅರ್ಥ ಮಾಡಿಕೊಳ್ಳುವ ಪ್ರಯತ್ನ ಪಡದೆ ಸುಮ್ಮನೇ ಬಾಯಿಪಾಠ ಮಾಡುತ್ತಾರೆ. ಈ ರೀತಿ ಕಲಿತ ವಿಷಯ ಸುಲಭವಾಗಿ ಮರೆತು ಹೋಗುವುದು ಮಾತ್ರವಲ್ಲದೇ ಅದನ್ನು ವಿಶ್ಲೇಷಣೆಗೆ ಬಳಸಿಕೊಳ್ಳುವುದಕ್ಕೆ ಅವರಿಗೆ ಸಾಧ್ಯ ಆಗುವುದಿಲ್ಲ. ಓದು ಬದುಕಿನಲ್ಲಿ ಎಂದಾದರೂ ಬಳಕೆಗೆ ಬರಬೇಕಾದರೆ ಅದನ್ನು ಅರ್ಥ ಮಾಡಿಕೊಂಡು ಓದುವುದು ಅಗತ್ಯ.
ಓದಿದ್ದನ್ನು ಮನನ ಮಾಡಿ
ಒಂದು ವಿಷಯವನ್ನು ಒಮ್ಮೆ ಓದಿ ಅಲ್ಲಿಗೇ ಬಿಟ್ಟು ಬಿಡುವುದಲ್ಲ. ಬದಲಿಗೆ ಅದನ್ನೇ ಮತ್ತೆ ಮತ್ತೆ ಓದುವುದರಿಂದ ಅದು ಶಾಶ್ವತ ನೆನಪಾಗಿ ನೆನಪಿನ ಕೋಶದೊಳಗೆ ಸೇರಿ ಹೋಗುತ್ತದೆ. ಆದುದರಿಂದ, ಓದಿ ಸ್ವಲ್ಪ ಸಮಯದ ಬಳಿಕ ಮತ್ತೆ ಅದನ್ನು ಬರೆಯಿರಿ ಅಥವಾ ನೆನಪಿಸಿಕೊಳ್ಳಲು ಪ್ರಯತ್ನಿಸಿ. ಮರೆತುಹೋದ ವಿಷಯದತ್ತ ಮತ್ತೊಮ್ಮೆ ಗಮನ ಹರಿಸಿ.
ಸತತ ಅಭ್ಯಾಸವಿರಲಿ
ಓದು ಒಂದು ಪ್ರಯಾಣ. ಹಾಗಾಗಿ ಸದಾ ಸಾಗುತ್ತಲೇ ಇರಬೇಕು. ಯಾವುದೇ ಕಲೆಯಾಗಲೀ ಅಭ್ಯಾಸ ಇಲ್ಲದೇ ಹೋದಾಗ ಮರೆವೆಗೆ ಸಲ್ಲುವಂತೆ ಓದು ಕೂಡಾ. ನಿರಂತರ ಅಭ್ಯಾಸ ಒಂದು ವಿಷಯಕ್ಕೆ ಹೆಚ್ಚಿನ ಸಮಯವನ್ನು ನೀಡಲು ಹಾಗೂ ಹೊಸ ವಿಷಯವನ್ನು ತಿಳಿಯಲು ಸಹಕಾರಿ.
ಏಕಾಗ್ರತೆ ಇರಲಿ
ಏಕಾಗ್ರತೆ ವೃದ್ಧಿಸಲು ಅರೋಗ್ಯ, ಸರಿಯಾದ ವಿಶ್ರಾಂತಿ, ವಿಷಯ ಪ್ರೀತಿ ಅಗತ್ಯ. ಜೊತೆಗೆ ಓದಿಗೆ ಸರಿಯಾದ ಸಮಯ ಮೀಸಲಿಡಿ. ಎಲ್ಲಕ್ಕಿಂತ ಮುಖ್ಯವಾಗಿ ಅನಗತ್ಯ ಆಕರ್ಷಣೆಗೆ ಒಳಗಾಗದಿರಿ.
ಓದಿದ್ದನ್ನು ಬರೆಯಿರಿ
ಬರಿಯ ಓದಿಗಿಂತ ಬರೆದು ಅಭ್ಯಾಸ ಮಾಡಿದಾಗ ನೆನಪು ಶಾಶ್ವತವಾಗುತ್ತದೆ. ಓದಿದ್ದನ್ನು ಮೆಲುಕು ಹಾಕುವುದು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಸ್ವಲ್ಪ ವಿಶ್ರಾಂತಿ ಕೂಡಾ ಇರಲಿ
ಓದಿನ ಮಧ್ಯೆ ವಿಶ್ರಾಂತಿ ಅಗತ್ಯ ಎನ್ನುತ್ತಾರೆ ಮನೋವಿಜ್ಞಾನಿಗಳು. ಏಕೆಂದರೆ ದಣಿದ ಮನಸ್ಸಿಗೆ ಓದು ಹತ್ತುವುದಿಲ್ಲ. ಅದರಲ್ಲೂ, ಒಂದೇ ವಿಷಯವನ್ನು ಇಡೀ ದಿನ ಓದಬೇಡಿ. ಮಧ್ಯೆ ಮಧ್ಯೆ ಅಂದರೆ ಸುಮಾರು ಒಂದು ಗಂಟೆಗೆ ಒಮ್ಮೆ ವಿಷಯ ಬದಲಾವಣೆ ಇರಲಿ.
ಓದಿದ್ದನ್ನು ಚರ್ಚಿಸಿ
ನೀವು ಓದಿದ ವಿಷಯದ ಬಗ್ಗೆ ನಿಮ್ಮ ಸಹಪಾಠಿಗಳ ಜೊತೆಗೆ ಚರ್ಚಿಸಿ. ಅರ್ಥ ಆಗದ ವಿಷಯ ಇದ್ದಲ್ಲಿ ಅಧ್ಯಾಪಕರಲ್ಲಿ ಕೇಳಿ ತಿಳಿದುಕೊಳ್ಳಿ. ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಸಿಸಿ.
ಅನಗತ್ಯ ಉದ್ವೇಗ, ಆತಂಕ ಬೇಡ
ಉತ್ತಮ ಮನಸ್ಥಿತಿ ಉತ್ತಮ ಓದಿಗೆ ಪೂರಕ. ಪರೀಕ್ಷೆಯ ಹಿಂದಿನ ದಿನ ಮತ್ತು ಆ ದಿನ ಹೊಸ ವಿಷಯ ಕಲಿಯಲು ಮುಂದಾಗಬೇಡಿ. ಪುನರಾವರ್ತನೆ ಮಾಡಿ. ಅಂದಂದಿನ ಪಾಠಗಳನ್ನು ಅಂದಂದೇ ಓದಿ. ಅಲ್ಪ ಅವಧಿಯಲ್ಲಿ ಎಲ್ಲವನ್ನೂ ಓದಲು ಮುಂದಾಗಬೇಡಿ. ಸಾಮರ್ಥ್ಯದ ಬಗ್ಗೆ ಸಕಾರಾತ್ಮಕ ಧೋರಣೆ ಇರಲಿ. ಸಹಪಾಠಿಗಳೊಂದಿಗೆ ಅನಗತ್ಯ ಹೋಲಿಕೆ, ಅನಾರೋಗ್ಯಕರ ಸ್ಪರ್ಧೆ ಬೇಡ. ಆರೋಗ್ಯಕರ ಹವ್ಯಾಸಗಳನ್ನು ಓದಿನ ಒತ್ತಡದಿಂದ ಹೊರಬರಲು ರೂಡಿಸಿಕೊಳ್ಳಿ. ಆತ್ಮವಿಶ್ವಾಸ, ಸಕಾರಾತ್ಮಕ ಭಾವದಿಂದ ಕೂಡಿದ ಓದು ಗೆಲುವಿನ ಬಾಗಿಲನ್ನು ತೆರೆದೇ ತೆರೆಯುವುದು.
✍️ಡಾ. ಮೈತ್ರಿ ಭಟ್, ವಿಟ್ಲ








