Friday, May 17, 2024
spot_imgspot_img
spot_imgspot_img

ಸುಬ್ರಹ್ಮಣ್ಯ: ಇಂದು ಲಕ್ಷ ದೀಪೋತ್ಸವ, ಕುಣಿತ ಭಜನೆ| ಬೀದಿಯಲ್ಲಿ ಉರುಳುಸೇವೆಗೆ ಚಾಲನೆ

- Advertisement -G L Acharya panikkar
- Advertisement -

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.12ರಂದು ದೇವರ ಲಕ್ಷದೀಪೋತ್ಸವ ನಡೆಯಲಿದ್ದು, ರಥಬೀದಿಯಲ್ಲಿ ದೇವರ ರಥೋತ್ಸವ, ರಾತ್ರಿ ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲೋತ್ಸವ ನೆರವೇರಲಿದೆ.

ಸಂಜೆ ದೇವಳದಲ್ಲಿ ಅಂಕುರಪೂಜೆ ನಡೆದ ಬಳಿಕ ಆದಿ ಸುಬ್ರಹ್ಮಣ್ಯದಲ್ಲಿ ರಂಗಪೂಜೆ ಬಳಿಕ ದೇವರ ರಥೋತ್ಸವ ನೆರವೇರಲಿದೆ. ರಥದಲ್ಲಿ ಕಾಶಿಕಟ್ಟೆಗೆ ತೆರಳಿ ಕಾಶಿಕಟ್ಟೆ ಮಹಾಗಣಪತಿ ಸನ್ನಿಧಾನದಲ್ಲಿ ದೇವರ ಗುರ್ಜಿಪೂಜೆ ನಡೆಯಲಿದೆ. ರಥೋತ್ಸವದ ಸಂದರ್ಭ ರಥ ಬೀದಿಯಲ್ಲಿ ಲಕ್ಷ ಹಣತೆ ಉರಿಸಲಾಗುತ್ತದೆ.

ಮಣ್ಣಿನ ಹಣತೆಯ ಲಕ್ಷ ದೀಪಗಳನ್ನು ರಥಬೀದಿಯಿಂದ ಕಾಶಿಕಟ್ಟೆ ಗಣಪತಿ ದೇವಸ್ಥಾನ, ಸವಾರಿ ಮಂಟಪ, ಅಭಯ ಹನುಮಂತ ದೇವಸ್ಥಾನ, ಕುಮಾರಧಾರ ಮತ್ತು ಆದಿಸುಬ್ರಹ್ಮಣ್ಯದಲ್ಲಿ ಹಚ್ಚಲಾಗುವುದು. ಏಕ ಕಾಲದಲ್ಲಿ ಹಣತೆಯನ್ನು ಉರಿಸಲು ಸ್ಥಳಿಯ ಭಕ್ತ ವೃಂದದವರಿಗೆ ಅವಕಾಶ ಕಲ್ಪಿಸಲಾಗಿದೆ. ದೇಗುಲದ ರಾಜಗೋಪುರ ಬಳಿಯಿಂದ ರಥಬೀದಿ, ಅಡ್ಡಬೀದಿಯಲ್ಲಿ ಕುಣಿತ ಭಜನೆ ನಡೆಯಲಿದೆ. ಮೈಸೂರು ರಾಮಚಂದ್ರ ಆಚಾರ್ ಮತ್ತು ತಂಡ ಭಜನಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಗುರ್ಜಿಪೂಜೆ: ರಾತ್ರಿ ಮಹಾಪೂಜೆಯ ನಂತರ ದೇವರ ಹೊರಾಂಗಣ ಉತ್ಸವ ಆರಂಭವಾಗಿ ಕಾಚುಕುಜುಂಬ ದೈವ ಮತ್ತು ದೇವರ ಭೇಟಿ ಬಳಿಕ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ನಡೆಯಲಿದೆ. ದೇವರು ರಥಬೀದಿ ಪ್ರವೇಶಿಸಿದ ನಂತರ ಚಂದ್ರಮಂಡಲ ರಥೋತ್ಸವ, ಬಳಿಕ ಕಾಶಿಕಟ್ಟೆಯಲ್ಲಿ ಮಯೂರ ವಾಹನನಾಗಿ ಕುಕ್ಕೆ ಸುಬ್ರಹ್ಮಣ್ಯನಿಗೆ ಗುರ್ಜಿ ಪೂಜೆ ನಡೆಯಲಿದೆ.

ಬೀದಿ ಉರುಳು ಸೇವೆ ಆರಂಭ: ಚಂದ್ರಮಂಡಲೋತ್ಸವದ ಬಳಿಕ ಬೀದಿ ಉರುಳು ಸೇವೆಯನ್ನು ಭಕ್ತರು ಆರಂಭಿಸುತ್ತಾರೆ. ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲಿಸುವ ವಿಶಿಷ್ಠ ಸೇವೆಯಲ್ಲಿ ಒಂದಾದ ಬೀದಿಮಡೆಸ್ನಾನ ಸೇವೆಯನ್ನು ಸ್ವಯಂಸ್ಫೂರ್ತಿಯಿಂದ ಭಕ್ತರು ಲಕ್ಷದೀಪೋತ್ಸವ ರಥೋತ್ಸವದ ಬಳಿಕ ಆರಂಭಿಸಿ ಚಂಪಾಷಷ್ಠಿ ಮಹಾರಥೋತ್ಸವದ ವರೆಗೆ ನೆರವೇರಿಸುತ್ತಾರೆ.

- Advertisement -

Related news

error: Content is protected !!