ಪುತ್ತೂರು: ಪುತ್ತೂರು ‘ಸುದ್ದಿ ಚಾನೆಲ್’ ಲೋಕಾರ್ಪಣೆ, ಸುದ್ದಿ ವರ್ಷದ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಸನ್ಮಾನ ಸಹಿತ ವಿವಿಧ ಕಾರ್ಯಕ್ರಮಗಳು ಫೆ.20ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.

ಬೆಳಿಗ್ಗೆ 11.30ಕ್ಕೆ ಪುತ್ತೂರು ದೇವಣ್ಣ ಕಿಣಿ ಕಟ್ಟಡದಲ್ಲಿರುವ ಸುದ್ಧಿ ಮೀಡಿಯಾ ಸೆಂಟರ್‌ನಲ್ಲಿ ಸುದ್ದಿ ಚಾನೆಲ್ ಕಛೇರಿ ಉದ್ಘಾಟನೆ ಮತ್ತು ಖ್ಯಾತ ಕಲಾವಿದರನ್ನೊಳಗೊಂಡ ‘ಅಂಬರ ಮರ್ಲೆರ್' ತುಳು ಹಾಸ್ಯ ಧಾರಾವಾಹಿಗೆ ಕರ್ನಾಟಕ ಸರಕಾರದ ಬಂದರು, ಮೀನುಗಾರಿಕೆ ಮತ್ತು ಜಲ ಸಾರಿಗೆ ಖಾತೆಯ ಸಚಿವರಾಗಿರುವ ಸುಳ್ಯ ಶಾಸಕ ಎಸ್.ಅಂಗಾರವರು ಚಾಲನೆ ನೀಡಲಿದ್ದಾರೆ. ಬಳಿಕ
‘ಅಂಬರ ಮರ್ಲೆರ್’ ತಂಡದ ಕಲಾವಿದರನ್ನು ಸನ್ಮಾನಿಸಲಿರುವ ಅಂಗಾರರವರು ಶುಭ ನುಡಿಗಳನ್ನಾಡಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರವರು ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರವರು ಪುತ್ತೂರು ಸುದ್ದಿ ಚಾನೆಲ್ ಲೋಕಾರ್ಪಣೆಗೊಳಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾದ ದ.ಕ.ಸಂಸದ ನಳಿನ್ ಕುಮಾರ್ ಕಟೀಲ್‌ರವರು ಸುದ್ದಿ ಚಾನೆಲ್‌ನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಾಸಂಶನೆಗೈಯಲಿದ್ದಾರೆ.

ಮಾಜಿ ಸಚಿವ ಬಿ. ರಮಾನಾಥ ರೈ, ಮಾಜಿ ಸಚಿವ, ಹಾಲಿ ಮಂಗಳೂರು ಶಾಸಕ ಯು.ಟಿ.ಖಾದರ್ ಮತ್ತು ಮಂಗಳೂರು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್‌ರವರು `ಸುದ್ದಿ ವರ್ಷದ ಪ್ರಶಸ್ತಿ’ ಪುರಸ್ಕೃತ ಸಾಧಕರಿಗೆ ಸನ್ಮಾನ ನೆರವೇರಿಸಲಿದ್ದಾರೆ.

ಪುತ್ತೂರು ಶಾಸಕ ಸಂಜೀವ ಮಠಂದೂರು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರವರು ಸುದ್ದಿ ಬಿಡುಗಡೆ ಸಮೂಹ ಸಂಸ್ಥೆಯಲ್ಲಿ ಕಳೆದ ಹದಿನೈದು ವರ್ಷಗಳಿಗಿಂತ ಅಧಿಕ ಸಮಯಗಳಿಂದ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಸಿಬ್ಬಂದಿಗಳಿಗೆ ಮತ್ತು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ನೆರವೇರಿಸಲಿದ್ದಾರೆ. ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ಮತ್ತು ಹಿರಿಯ ಪತ್ರಕರ್ತ ಈಶ್ವರ ದೈತೋಟರವರು ಸುದ್ದಿ ಸಮೂಹ ಸಂಸ್ಥೆಯಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದವರಿಗೆ ಗೌರವಾರ್ಪಣೆ ಮಾಡಲಿದ್ದು ಬಳಿಕ ಈಶ್ವರ ದೈತೋಟರವರು ಗ್ರಾಮೀಣ ಪತ್ರಿಕೋದ್ಯಮದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ಪಿ.ಆರ್.ಸಿ.ಐಯ ಚೆರ್‌ಮ್ಯಾನ್ ಎಂ.ಬಿ.ಜಯರಾಮ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈಯವರು ರಾಜ್ಯದ, ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳನ್ನು ಗೌರವಿಸಲಿದ್ದಾರೆ. ನಂತರ ಎಂ.ಬಿ.ಜಯರಾಮರವರು ಪಬ್ಲಿಕ್ ರಿಲೇಷನ್ ಕೌನ್ಸಿಲ್ ಎಂಬ ವಿಚಾರದಲ್ಲಿ, ಶಿವಾನಂದ ತಗಡೂರುರವರು ಸಂಘಟನೆ ಮತ್ತು ಮಾಧ್ಯಮ ಎಂಬ ವಿಷಯದಲ್ಲಿ ಮತ್ತು ಪಿ.ಬಿ.ಹರೀಶ್ ರೈಯವರು ಪತ್ರಿಕೋದ್ಯಮ ಮತ್ತು ಸುದ್ದಿ ಎಂಬ ವಿಷಯದಲ್ಲಿ ಉಪನ್ಯಾಸ ನೀಡಲಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೂಗು ಸೇತುವೆಗಳ ಸರದಾರ ಡಾ.ಗಿರೀಶ್ ಭಾರಾಧ್ವಾಜ್, ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಕೆ. ಸೀತಾರಾಮ ರೈ, ಪುತ್ತೂರು ಶ್ರೀರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಎನ್.ಸುಬ್ರಹ್ಮಣ್ಯ ಕೊಳತ್ತಾಯ, ಬೆಳ್ತಂಗಡಿ ಗಂಡಿಬಾಗಿಲು ಸಿಯೋನ ಆಶ್ರಮ ಟ್ರಸ್ಟ್‌ನ ಯು.ಸಿ.ಪೌಲೋಸ್ ಮತ್ತು ಉಜಿರೆಯ ಬದುಕು ಕಟ್ಟೋಣ ತಂಡದ ಮೋಹನ್ ಕುಮಾರ್‌ರವರು ಸುಳ್ಯ, ಪುತ್ತೂರು, ಬೆಳ್ತಂಗಡಿ ಸುದ್ದಿ ವರ್ಷದ ಪ್ರಶಸ್ತಿ ಪುರಸ್ಕೃತರಾಗಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ರಂಗ ಮಯೂರಿ ಕಲಾ ಶಾಲೆ ಸುಳ್ಯ ಇಲ್ಲಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ, ವಿಭಾ ಶ್ರೀನಿವಾಸ ನಾಯಕ್ ಇಂದಾಜೆಯವರಿಂದ ಸಂಗೀತ ಕಾರ್ಯಕ್ರಮ, ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್‌ರವರಿಂದ ಜಾದೂ ವಿಸ್ಮಯ ಮತ್ತು ಸುದ್ದಿ ಬಳಗದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
