Thursday, June 4, 2026
spot_imgspot_img
spot_imgspot_img

ಆನ್‌ಲೈನ್ ಕೌಶಲ್ಯದ ಆಟಗಳ ಮೇಲಿನ ಬೆಟ್ಟಿಂಗ್‌ಗೆ ಸಾಂವಿಧಾನಿಕ ರಕ್ಷಣೆ ಇಲ್ಲ- ಸುಪ್ರೀಂ ಕೋರ್ಟ್

- Advertisement -
- Advertisement -

ನವದೆಹಲಿ: ಆನ್‌ಲೈನ್ ಗೇಮಿಂಗ್ ಮತ್ತು ಜೂಜಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ನಿಂದ ಜಯ ಸಿಕ್ಕಿದೆ. ಹಣ ಅಥವಾ ಪಣವನ್ನು ಒಡ್ಡಿ ಆಡುವ ಆನ್‌ಲೈನ್ ಕೌಶಲ್ಯದ ಆಟಗಳ ಮೇಲಿನ ಬೆಟ್ಟಿಂಗ್‌ಗೆ ಯಾವುದೇ ಸಾಂವಿಧಾನಿಕ ರಕ್ಷಣೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

ಇದರೊಂದಿಗೆ, ಆನ್‌ಲೈನ್ ಜೂಜಾಟ ಮತ್ತು ಬೆಟ್ಟಿಂಗ್ ಅನ್ನು ನಿಷೇಧಿಸುವ ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳ ಕಾನೂನುಗಳ ಸಿಂಧುತ್ವವನ್ನು ದೇಶದ ಅತ್ಯುನ್ನತ ನ್ಯಾಯಾಲಯವು ಎತ್ತಿಹಿಡಿದಿದ್ದು, ಹೈಕೋರ್ಟ್‌ಗಳ ಈ ಹಿಂದಿನ ಆದೇಶಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ಮಹತ್ವದ ತೀರ್ಪನ್ನು ಪ್ರಕಟಿಸಿದೆ.

ಟ್ರೇಡ್ ರೈಟ್ಸ್ ಅನ್ವಯಿಸುವುದಿಲ್ಲ: ಸಂವಿಧಾನದ ವಿಧಿ 19(1)(g) ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ತನಗಿಷ್ಟ ಬಂದ ವ್ಯಾಪಾರ ಅಥವಾ ವೃತ್ತಿ ಮಾಡುವ ಸ್ವಾತಂತ್ರ್ಯವಿದೆ. ಆದರೆ, ಹಣವನ್ನು ಪಣಕ್ಕಿಟ್ಟು ಆಡುವ ಜೂಜಾಟ ಅಥವಾ ಬೆಟ್ಟಿಂಗ್ ಪ್ರಕ್ರಿಯೆಯು ಈ ‘ಮೂಲಭೂತ ವ್ಯಾಪಾರದ ಹಕ್ಕಿನ’ ಅಡಿಯಲ್ಲಿ ಬರುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಆಟವು ಕೌಶಲ್ಯ ಆಧಾರಿತವಾಗಿದ್ದರೂ(ಉದಾಹರಣೆಗೆ ರಮ್ಮಿ, ಪೋಕರ್ ಅಥವಾ ಫ್ಯಾಂಟಸಿ ಗೇಮ್ಸ್), ಅದರಲ್ಲಿ ಹಣವನ್ನು ಪಣಕ್ಕಿಟ್ಟು ಬಾಜಿ ಕಟ್ಟಿದಾಗ ಅದು ಜೂಜಿನ ಸ್ವರೂಪ ಪಡೆದುಕೊಳ್ಳುತ್ತದೆ. ಅಂತಹ ವ್ಯವಹಾರಗಳಿಗೆ ಕಾನೂನಿನ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಸಾರ್ವಜನಿಕ ಸುವ್ಯವಸ್ಥೆ, ಯುವಜನರ ಹಿತರಕ್ಷಣೆ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಆನ್‌ಲೈನ್ ಬೆಟ್ಟಿಂಗ್ ಆಟಗಳನ್ನು ನಿಷೇಧಿಸುವ ಅಥವಾ ನಿಯಂತ್ರಿಸುವ ಸಂಪೂರ್ಣ ಕಾನೂನು ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಯಾವ ಆಟಗಳಲ್ಲಿ ಗೆಲುವು ಅಥವಾ ಸೋಲು ಕೇವಲ ಅದೃಷ್ಟದ ಮೇಲೆ ನಿರ್ಧಾರವಾಗದೆ, ಆಟಗಾರನ ವೈಯಕ್ತಿಕ ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತದೆಯೋ ಅದನ್ನು ‘ಗೇಮ್ ಆಫ್ ಸ್ಕಿಲ್’ (ಕೌಶಲ್ಯದ ಆಟ) ಎಂದು ಹೇಳಲಾಗುತ್ತದೆ.

- Advertisement -

Related news

error: Content is protected !!