ಹಾಸನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದು,ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಹಿರಿಯ ಪುತ್ರ ಸೂರಜ್ ಎಚ್‍ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ರಾಜಕೀಯದ ಅಖಾಡಕ್ಕೆ ಇಳಿದಂತಾಗಿದೆ.

ಎಚ್.ಡಿ.ರೇವಣ್ಣ ಹಿರಿಯ ಪುತ್ರ ಡಾ.ಸೂರಜ್ ರೇವಣ್ಣ ಹೊಳೆನರಸೀಪುರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಸಲ್ಲಿಸಿದ್ದು ಇದೀಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರ ವಿರುದ್ಧ ಯಾರೊಬ್ಬರೂ ನಾಮಪತ್ರ ಸಲ್ಲಿಸದಿದ್ದರಿಂದ ಸೂರಜ್ ರೇವಣ್ಣ ಹೆಚ್‍ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಚನ್ನರಾಯಪಟ್ಟಣ ತಾಲೂಕಿನಲ್ಲಿ ನಾಯಕರಾಗಿ ಗುರುತಿಸಿಕೊಂಡಿರುವ ಡಾ.ಸೂರಜ್, ದಂಡಿಗನಹಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಮಾಜಿಕ ಚಟುವಟಿಕೆಗಳ ಮೂಲಕ ಸಾರ್ವಜನಿಕ ಜೀವನಕ್ಕೆ ಹತ್ತಿರವಾಗಿದ್ದಾರೆ.



ತಂದೆ ಎಚ್.ಡಿ. ರೇವಣ್ಣ, ಜಿಪಂ ಸದಸ್ಯೆ ಹಾಗೂ ತಾಯಿ ಭವಾನಿ ರೇವಣ್ಣ, ಸಹೋದರ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಬೆನ್ನೆಲುಬಾಗಿ ನಿಂತು ಚುನಾವಣಾ ಪ್ರಚಾರ ಕಾರ್ಯಗಳಲ್ಲಿ ಡಾ.ಸೂರಜ್ ಸಕ್ರಿಯರಾಗಿ ತೊಡಗಿಕೊಂಡಿದ್ದರು. ಇದೀಗ ಎಚ್‍ಡಿಸಿಸಿ ಬ್ಯಾಂಕ್ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದಾರೆ.
