Tuesday, May 7, 2024
spot_imgspot_img
spot_imgspot_img

ಮಂಗಳೂರು: ನಾಲ್ಕು ವರ್ಷದ ಹಿಂದೆ ಪತ್ನಿಯನ್ನು ಹತ್ಯೆಗೈದ ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

- Advertisement -G L Acharya panikkar
- Advertisement -

ಮಂಗಳೂರು: ನಾಲ್ಕು ವರ್ಷದ ಹಿಂದೆ ಪತ್ನಿಯನ್ನು ಹತ್ಯೆಗೈದ ಆರೋಪಿ ಪತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ನಾಲ್ಕು ವರ್ಷದ ಹಿಂದೆ ಕಾವೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮೂಲತಃ ಹಾಸನ ಅರಕಲಗೂಡಿನ ಮಾಲಿಪಟ್ಣದ, ಟಿಪ್ಪರ್ ಚಾಲಕ ಗಣೇಶ್ ಕುಮಾರ್ (46) ಶಿಕ್ಷೆಗೊಳಗಾದ ಆರೋಪಿ.

ಈತ ತನ್ನ ಪತ್ನಿಯ ಶೀಲ ಶಂಕಿಸಿ ದಿನನಿತ್ಯ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ಎಂಬ ಆರೋಪವಿತ್ತು. 2020ರ ಜು.1ರಂದು ಸಂಜೆ 5:30ಕ್ಕೆ ಸಾಮಾನು ತರಲಿಕ್ಕಿದೆ ಎಂದು ಹೇಳಿ ಪತ್ನಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದ. ರಾತ್ರಿ 7ರಿಂದ 7:20ರ ಮಧ್ಯೆ ಅಂತೋನಿಕಟ್ಟೆ ಎಂಬಲ್ಲಿರುವ ತಾನು ಕೆಲಸ ಮಾಡುತ್ತಿದ್ದ ಕಪ್ಪು ಕಲ್ಲಿನ ಕೋರೆಯ ಮೇಲಿನಿಂದ ಪತ್ನಿಯ ಕತ್ತು ಹಿಸುಕಿ ದೂಡಿ ಹಾಕಿ ಹತ್ಯೆ ಮಾಡಿದ್ದ. ತನಿಖೆ ವೇಳೆ ಮಹಿಳೆ ಸಾವನ್ನಪ್ಪಿದ ಸ್ಥಳದಲ್ಲಿ ಮಹಿಳೆಯ ಹೆಲ್ಮೆಟ್ ಮತ್ತು ಪರ್ಸ್ ಪತ್ತೆಯಾಗಿತ್ತು.

ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ಎಸ್.ವಿ ಅವರು ಪ್ರಕರಣದ ವಿಚಾರಣೆ ನಡೆಸಿದ್ದರು. ಗಣೇಶ್ ಮೇಲಿನ ಕೊಲೆ ಆರೋಪ ಸಾಬೀತಾಗಿದ್ದರಿಂದ ಆತನಿಗೆ ಕಠಿಣ ಜೀವಾವಧಿ ಶಿಕ್ಷೆ ಮತ್ತು ₹ 1 ಲಕ್ಷ ದಂಡ, ಪತ್ನಿಗೆ ಹಿಂಸೆ ನೀಡಿದ್ದಕ್ಕೆ 3 ವರ್ಷ ಕಠಿಣ ಶಿಕ್ಷೆ ಮತ್ತು ₹25 ಸಾವಿರ ದಂಡ, ಜೀವ ಬೆದರಿಕೆ ಒಡ್ಡಿದ್ದಕ್ಕೆ 2 ವರ್ಷ ಕಠಿಣ ಶಿಕ್ಷೆ ಮತ್ತು ₹25 ಸಾವಿರ ದಂಡ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ತಪ್ಪಿದಲ್ಲಿ ಅಪರಾಧಿಯು ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದೂ ಅವರು ಆದೇಶ ಮಾಡಿದ್ದಾರೆ.
ಈ ಕೊಲೆಯಿಂದ ಸಂತ್ರಸ್ತರಾಗಿರುವ ದಂಪತಿಯ ಇಬ್ಬರು ಮಕ್ಕಳಿಗೆ ಸೂಕ್ತ ಪರಿಹಾರ ಒದಗಿಸಲು ಕ್ರಮ ವಹಿಸುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರಿ ವಕೀಲರಾದ ಜ್ಯೋತಿ ಪ್ರಮೋದ ನಾಯಕ ಮತ್ತು ಬಿ.ಶೇಖರ ಶೆಟ್ಟಿ ಹಾಗೂ ಚೌಧರಿ ಮೋತಿಲಾಲ ಅವರು ಸಂತ್ರಸ್ತರ ಪರ ವಾದ ಮಂಡಿಸಿದ್ದರು.

- Advertisement -

Related news

error: Content is protected !!