ಬೆಂಗಳೂರು: ಆರೋಗ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆಯು ಜನರ ಆರೋಗ್ಯದ ಹಿತದೃಷ್ಟಿಯಿಂದ ಈಗಾಗಲೇ ಗೋಬಿ, ಕಬಾಬ್, ಕಾಟನ್ ಕ್ಯಾಂಡಿ, ಪಾನಿಪುರಿ ತಿನಿಸುಗಳ ಮೇಲೆ ಒಂದಷ್ಟು ನಿರ್ಬಂಧವನ್ನು ಹೇರಿದೆ. ಇದೀಗ ಬೇಕರಿಯ ತಿನಿಸುಗಳ ಮೇಲೆ ನಿರ್ಬಂಧ ತರಲು ಇಲಾಖೆ ತಯಾರಿ ಮಾಡಿಕೊಳ್ಳುತ್ತಿದೆ.
ಮೊದಲಿಗೆ ಜನರು ಹೆಚ್ಚಾಗಿ ಸೇವಿಸುವಂತ ಕೇಕ್ ಗಳ ಮೇಲೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಇದಕ್ಕೆ ಪೂರಕವಾಗಿ ಕೇಕ್‌ಗೆ ಬಳಸುವ ಮೈದಾಹಿಟ್ಟು, ಕೋಕೋ ಪೌಡರ್, ಕ್ರೀಮ್‌ಗಳಿಗೆ ಬಳಸುವ ಪದಾರ್ಥಗಳು, ಫ್ಲೇವರ್‌ಗಳು ಹಾಗೂ ಬಣ್ಣ ಬಣ್ಣವಾಗಿರಲು ಬಳಸುವ ಕಲರ್‌ಗಳನ್ನ ಪರಿಶೀಲಿಸಲಾಗುತ್ತಿದೆ. ಪೈನಾಪಲ್, ರೆಡ್ ವೆಲ್ವೆಟ್, ಚಾಕೋಲೇಟ್ ಸೇರಿದಂತೆ ವಿವಿಧ ಫ್ಲೇವರ್ ನ ಕೇಕ್ ಗಳ ತಯಾರಿಕೆಗೆ ಅಥವಾ ಅದಕ್ಕೆ ಹಾಕುವ ಪದಾರ್ಥಗಳು ಜನರ ಆರೋಗ್ಯಕ್ಕೆ ಪೂರಕವಾ ಅಥವಾ ಮಾರಕವಾ ಎಂದು ತಿಳಿಯಲು ಇಲಾಖೆ ಮುಂದಾಗಿದೆ.
ಈಗಾಗಲೇ ಇಲಾಖೆಯು ಸುಮಾರು 264 ಕಡೆಗಳಲ್ಲಿ ಕೇಕ್‌ಗಳ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದೆ. ಇದರ ವರದಿಯಾಗಿ ಕಾಯುತ್ತಿದ್ದು, ವರದಿ ಪಾಸಿಟಿವ್ ಬಂದರೆ ಕೆಲವೊಂದು ಪದಾರ್ಥಗಳನ್ನು ನಿರ್ಬಂಧಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.