ಸುಳ್ಯ : ಅಪ್ಪ-ಅಮ್ಮನಿಗೆ ಮಗಳು ವಿದೇಶದಲ್ಲಿ ಕೆಲಸ ಸಿಕ್ಕಿದೆ ಹೋಗುವುದಾಗಿ ಹೇಳಿ ಏರ್ ಪೋರ್ಟ್ ತನಕ ಮನೆಯವರೇ ಕರೆದುಕೊಂಡು ಬಂದು ಬಿಟ್ಟು ಹೋದ ಬಳಿಕ ಅನ್ಯಕೋಮಿನ ಯುವಕನ ಜೊತೆ ಪರಾರಿಯಾಗಿರುವ ಘಟನೆ ನಡೆದಿದೆ.
ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಕೊಲ್ಲಮೊಗ್ರದ ಯುವತಿ ಈ ವರ್ಷವಷ್ಟೇ ಪಿಯುಸಿ ಪಾಸ್ ಆಗಿದ್ದಳು.ಇತ್ತೀಚೆಗೆ ಆಕೆ ತನ್ನ ಪೋಷಕರಿಗೆ ವಿದೇಶದಲ್ಲಿ ಕೆಲಸ ಸಿಕ್ಕಿದೆ. ಯುರೋಪ್ ನಲ್ಲಿ ಒಳ್ಳೆ ಉದ್ಯೋಗ , ಕೈ ತುಂಬಾ ಸಂಬಳ ಕೂಡ ಇದೆ. ನಾನು ಕೆಲಸಕ್ಕೆ ಸೇರಿಕೊಳ್ಳುತ್ತೇನೆ. ಪಾಸ್ ಪೋರ್ಟ್ ಕೂಡ ಆಗಿದೆ ಎಂದು ನಂಬಿಸಿದ್ದಳು. ಪಾಸ್ ಪೋರ್ಟ್ ಕೂಡ ರೆಡಿ ಮಾಡಿಕೊಂಡಿದ್ದಳು.
ವಿಮಾನದ ಟಿಕೆಟ್ ಕೂಡ ಬುಕ್ ಆಗಿದೆ ಎಂದು ಪೋಷಕರಿಗೆ ನಂಬಿಸಿದ್ದಳು. ಅದರಂತೆ ಪೋಷಕರು ಕೂಡ ಮಗಳಿಗೆ ಏನೋ ಒಳ್ಳೆಯದಾಗುತ್ತದೆ ಎಂದುಕೊಂಡು ಸ್ವತಃ ಮನೆಯವರು ಆಕೆಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಿ ಬಂದಿದ್ದಾರೆ. ಮಗಳು ವಿಮಾನ ನಿಲ್ದಾಣದೊಳಕ್ಕೆ ಹೋಗಿ ದೂರದಿಂದಲೇ ‘ಟಾಟಾ ಗುಡ್ ಬಾಯ್’ ಅಂತ ಹೇಳಿದ್ದಾಳೆ. ಆದರೆ, ಅಪ್ಪ-ಅಮ್ಮ ಅಲ್ಲಿಂದ ಹೋಗುತ್ತಿರುವುದನ್ನೇ ಕಾಯುತ್ತಿದ್ದ ಯುವತಿ, ಅಲ್ಲಿಂದ ಅನ್ಯಕೋಮಿನ ಯುವಕನ ಜೊತೆ ಎಸ್ಕೇಪ್ ಆಗಿದ್ದಾಳೆ.
ಮನೆಗೆ ಬಂದಾಯಿತು ಹೇಗಿದ್ದರೂ ಒಂದು ಫೋನ್ ಮಾಡೋಣ, ವಿಮಾನ ಹೊರಟಿತಾ ಎಂದು ಕೇಳೋಣ ಎಂದು ಕರೆ ಮಾಡಿದ್ದಾರೆ. ಈ ವೇಳೆ ಆಕೆಯ ಫೋನ್ ರಿಂಗ್ ಆಗಿದೆ. ಫೋನ್ ರಿಂಗ್ ಆಗಿದ್ದಿರಂದ ಮನೆಯವರಿಗೆ ಅನುಮಾನ ಶುರುವಾಗಿದೆ.
ಪೋಷಕರು ತಮ್ಮ ಮಗಳು ವಿದೇಶಕ್ಕೆ ಹೋದಳೆಂದು ನಂಬಿದ್ದರೆ, ವಿಮಾನ ನಿಲ್ದಾಣದಲ್ಲಿ ಸವಣೂರು ಮೂಲದ ಮುಸ್ಲಿಂ ಯುವಕನ ಜೊತೆ ಸೇರಿದ ಯುವತಿ ಬಳಿಕ ವಿಮಾನ ನಿಲ್ದಾಣದಿಂದ ಹೊರಬಂದು ವಾಪಾಸ್ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದಳು. ಆದರೆ ಆ ಬಸ್ ನ ನಿರ್ವಾಹಕ ಅನುಮಾನಗೊಂಡು ಆತ ಯುವತಿಯ ಫೋಟೋ ತೆಗೆದು ಹಿಂದೂ ಸಂಘಟನೆಯ ಯುವಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅದು ಪುತ್ತೂರಿನ ಹಿಂದೂ ಸಂಘಟನೆಗಳಿಗೂ ಮಾಹಿತಿ ಹೋಗಿತ್ತು.
ಬಳಿಕ ಯುವತಿಯ ಫೋಟೋ ಹಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಲಾಗಿದ್ದು, ಫೋಟೋದಲ್ಲಿರುವವಳು ಕೊಲ್ಲಮೊಗ್ರಿನ ಯುವತಿ ಎಂಬುದು ಗೊತ್ತಾಗುತ್ತಿದ್ದಂತೆ ಆಕೆಯ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು.
ಇತ್ತ ಪೋಷಕರಿಗೆ ತಮ್ಮ ಮಗಳು ವಿದೇಶಕ್ಕೆ ತೆರಳದಿರುವುದು ಖಚಿತವಾಗುತ್ತಿದ್ದಂತೆ ಸುಬ್ರಹ್ಮಣ್ಯ ಪೋಲಿಸ್ ಠಾಣಾಧಿಕಾರಿ ಕಾರ್ತಿಕ್ ಅವರನ್ನು ಸಂಪರ್ಕಿಸಿದ್ದು, ಆಕೆಯ ಮೊಬೈಲ್ ಲೊಕೇಷನ್ ಆಧಾರದಲ್ಲಿ ಆಕೆ ಬೆಂಗಳೂರಿನ ಹೊರವಲಯದಲ್ಲಿ ಇರುವ ಬಗ್ಗೆ ತಿಳಿದುಬಂದಿತ್ತು.
ಈ ಸಮಯದಲ್ಲಿ ಸಬ್ ಇನ್ಸ್‌ಪೆಕ್ಟರ್ ಕಾರ್ತಿಕ್ ಅವರು ಇಲ್ಲಿಂದ ಬೆಂಗಳೂರಿಗೆ ಸುಮಾರು ಕಿ.ಮೀ. ದೂರವಿರುವ ಕಾರಣ ಕೂಡಲೇ ಬೆಂಗಳೂರಿನ ಪೋಲಿಸ್ ಠಾಣೆಯಲ್ಲಿ ದೂರು ನೀಡುವಂತೆ ಸಲಹೆ ನೀಡಿದ್ದು, ಅಲ್ಲಿ ದೂರು ದಾಖಲಿಸಿಕೊಳ್ಳದೇ ಇದ್ದರೆ ತಾನೇ ಖುದ್ದಾಗಿ ಪ್ರಕರಣ ದಾಖಲಿಸಿಕೊಳ್ಳುವ ಭರವಸೆ ನೀಡಿದ್ದರು. ಆದರೆ ಬಳಿಕ ಯುವತಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು ಪೋಷಕರ ಚಿಂತೆಗೆ ಕಾರಣವಾಗಿತ್ತು.
ನಂತರ ಬೆಂಗಳೂರಿಗೆ ತೆರಳಿದ ಪೋಷಕರು ಉಪ್ಪಾರಪೇಟೆ ಪೋಲಿಸ್ ಠಾಣೆಯಲ್ಲಿ ಕಳೆದ 28ರಂದು ದೂರು ನೀಡಿದ್ದು, ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಉಪ್ಪಾರಪೇಟೆ ಪೋಲಿಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಉಪ್ಪಾರಪೇಟೆ ಪೋಲಿಸ್ ಠಾಣೆಗೆ ಕರೆತಂದಿದ್ದು, ಇಂದು ಸುಬ್ರಹ್ಮಣ್ಯಕ್ಕೆ ಕರೆತರುವ ಮಾಹಿತಿ ಲಭಿಸಿದೆ.