


ಬೆಂಗಳೂರು: ಪ್ರಸಕ್ತ ಸಾಲಿನ ಮುಂಗಾರು ಅಧಿವೇಶನವು ಇಂದಿನಿಂದ ಆರಂಭವಾಗಲಿದ್ದು, ಆಗಸ್ಟ್ 27 ರವರೆಗೆ ಒಟ್ಟು 15 ದಿನಗಳ ಕಾಲ(10 ಕಾರ್ಯದಿನಗಳು) ಅಧಿವೇಶನ ನಡೆಯಲಿದೆ. ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ.
ಸಂಪುಟ ಸಹೋದ್ಯೋಗಿಗಳ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಿರುವ ಮುಖ್ಯಮಂತ್ರಿಗಳು, ಸಚಿವರ ಸಭೆ ನಡೆಸಿ ಪ್ರತಿಪಕ್ಷಗಳ ದಾಳಿಯನ್ನು ಮೆಟ್ಟಿಬಾರಿಸಲು ಅಗತ್ಯ ತಂತ್ರಗಾರಿಕೆ ರೂಪಿಸಿದ್ದಾರೆ. ಕಲಾಪದ ನಂತರ ಸಚಿವ ಸಂಪುಟ ಸಭೆಯೂ ನಡೆಯಲಿದ್ದು, ಪ್ರಮುಖ ವಿಷಯಗಳ ಕುರಿತು ಚರ್ಚೆ ಮುಂದುವರಿಯಲಿದೆ.
ಅಧಿವೇಶನದ ಮೊದಲ ದಿನವಾದ ಇಂದು, ಇತ್ತೀಚೆಗೆ ಅಗಲಿದ ಮಾಜಿ ಸಚಿವ ಡಿ. ಸುಧಾಕರ್, ಚೆನ್ನಮ್ಮ ದೇವೇಗೌಡ ಸೇರಿದಂತೆ ಹಲವು ಗಣ್ಯರಿಗೆ ಉಭಯ ಸದನಗಳಲ್ಲಿ ಸಂತಾಪ ಸೂಚಿಸಲಾಗುತ್ತದೆ,
ವಿಧಾನಸಭಾಧ್ಯಕ್ಷರಾಗಿದ್ದ ಯು.ಟಿ. ಖಾದರ್ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಹಿನ್ನೆಲೆಯಲ್ಲಿ, ಹಿರಿಯ ನಾಯಕ ಟಿ.ಬಿ. ಜಯಚಂದ್ರ ಅವರನ್ನು ಹಂಗಾಮಿ ಸಭಾಧ್ಯಕ್ಷರನ್ನಾಗಿ ಹಾಗೂ ಪುಟ್ಟಣ್ಣ ಅವರನ್ನು ವಿಧಾನ ಪರಿಷತ್ ಹಂಗಾಮಿ ಸಭಾಪತಿಯನ್ನಾಗಿ ನೇಮಿಸಲಾಗಿದೆ.
ಆಗಸ್ಟ್ 14 ರಂದು ಹೊಸ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಕಾಂಗ್ರೆಸ್ ಪಕ್ಷದಿಂದ ಸಭಾಧ್ಯಕ್ಷ ಸ್ಥಾನಕ್ಕೆ ಜಿ.ಎಸ್. ಪಾಟೀಲ್, ಸಭಾಪತಿ ಹುದ್ದೆಗೆ ಸಲೀಂ ಅಹ್ಮದ್ ಹಾಗೂ ಉಪಸಭಾಪತಿ ಹುದ್ದೆಗೆ ಉಮಾಶ್ರೀ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಆದರೆ, ಉಪಸಭಾಧ್ಯಕ್ಷ ಹುದ್ದೆಗೆ ಸೂಚಿತರಾಗಿದ್ದ ಎ.ಎಸ್. ಪೊನ್ನಣ್ಣ ಅವರನ್ನು ಸಿಎಂ ರಾಜಕೀಯ ಸಲಹೆಗಾರರನ್ನಾಗಿ ನೇಮಿಸಿರುವುದರಿಂದ ಆ ಸ್ಥಾನಕ್ಕೆ ಪರ್ಯಾಯ ಅಭ್ಯರ್ಥಿಯ ಹುಡುಕಾಟ ಮುಂದುವರಿದಿದೆ.
ಆರೋಪ ಎದುರಿಸುತ್ತಿದ್ದ ಬಿ. ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದನ್ನು ಖಂಡಿಸಿ ಬಿಜೆಪಿ ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿದೆ. ಬಿಡದಿ ಟೌನ್ಶಿಪ್ ಯೋಜನೆ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಪಾದಯಾತ್ರೆ ಹಾಗೂ ಸದನದ ಒಳಗೂ ತೀವ್ರ ಹೋರಾಟ ನಡೆಸಲು ತೀರ್ಮಾನಿಸಿವೆ.
ರಾಜ್ಯದಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಮಳೆ ಹಾನಿ, ಕಾವೇರಿ ನೀರು ಹಂಚಿಕೆ ವಿವಾದ ಮತ್ತು ಪ್ರಮುಖ ವಿಧೇಯಕಗಳ ಮಂಡನೆ ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ.
ಆಗಸ್ಟ್ 15 ಶನಿವಾರ ಹಾಗೂ 16 ಭಾನುವಾರ ಸರ್ಕಾರಿ ರಜೆ ಇರಲಿದ್ದು, ಆಗಸ್ಟ್ 17 ರಿಂದ ಕಲಾಪ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ. ಶಾಸಕರು ಸಚಿವರಾಗಿ ಬಡ್ತಿ ಪಡೆದಿರುವುದರಿಂದ ಆಡಳಿತ ಪಕ್ಷದ ಆಸನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.
ಸಿದ್ದರಾಮಯ್ಯ, ಹೆಚ್.ಕೆ. ಪಾಟೀಲ್, ದಿನೇಶ್ ಗುಂಡೂರಾವ್ ಸೇರಿದಂತೆ ಪ್ರಮುಖ ನಾಯಕರ ಆಸನಗಳಲ್ಲಿ ಪಲ್ಲಟವಾಗಿದ್ದು, ಹಿರಿತನದ ಆಧಾರದ ಮೇಲೆ ಹೊಸ ಸಚಿವರಿಗೆ ಮುಂಭಾಗದ ಸಾಲಿನಲ್ಲಿ ಆಸನ ಕಲ್ಪಿಸಲಾಗಿದೆ. ವಿಧಾನ ಪರಿಷತ್ ಹಂಗಾಮಿ ಸಭಾಪತಿ ಪುಟ್ಟಣ್ಣ ಅವರು ಕಲಾಪದ ಸಿದ್ಧತೆಗಳನ್ನು ಪರಿಶೀಲಿಸಿದ್ದು, ಅಧಿವೇಶನ ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.








