Sunday, August 30, 2026
spot_imgspot_img
spot_imgspot_img

ಮಂಗಳೂರು: 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ಶೀಟರ್ ಸಫ್ವಾನ್ ಹುಸೇನ್ ಸಿಸಿಬಿ ಪೊಲೀಸರ ಬಲೆಗೆ

- Advertisement -
- Advertisement -

ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಸಿಸಿಬಿ (CCB) ಪೊಲೀಸರ ವಿಶೇಷ ಕಾರ್ಯಾಚರಣೆಯಲ್ಲಿ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಸಜ್ವಾನ್ ಹುಸೈನ್ (42) ಎಂಬಾತನನ್ನು ಅಂಧ್ರಪ್ರದೇಶದ ರಾಯಚೋಟೆ ಪ್ರದೇಶದಿಂದ ಬಂಧಿಸಲಾಗಿದೆ.


ಬಂಧಿತ ಸಜ್ವಾನ್ ಹುಸೈನ್, ದಿ. ಹಮ್ಮಬ್ಬ ಅವರ ಪುತ್ರನಾಗಿದ್ದು, ಮಂಗಳೂರು ತಾಲೂಕು ಹಳೆಯಂಗಡಿ ಗ್ರಾಮದ ಕೊಪ್ಪಳ ಹೌಸ್ ನಿವಾಸಿಯಾಗಿದ್ದಾನೆ. ಈತನ ವಿರುದ್ಧ ಮಂಗಳೂರು ನಗರ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ 02 ಕೊಲೆ, 04 ಕೊಲೆಯತ್ನ, ಗ್ಯಾಂಗ್ ರೇಪ್, 05 ದರೋಡೆ, ಅಪಹರಣ, ಸುಲಿಗೆ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ, ಸರಗಳ್ಳತನ, ಜೈಲಿನಲ್ಲಿ ಸಹ ಖೈದಿಗಳ ಮೇಲೆ ಹಲ್ಲೆ, ಅಕ್ರಮ ಕೂಟ ಸೇರಿ ಹಲ್ಲೆ, ಕೊಲೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ, ದರೋಡೆಗೆ ತಯಾರಿ ಮತ್ತು ಸಂಚು ಸೇರಿದಂತೆ ಒಟ್ಟು ಸುಮಾರು 21 ಗಂಭೀರ ಪ್ರಕರಣಗಳು ದಾಖಲಾಗಿವೆ.


ಮುಲ್ಕಿ ಪೊಲೀಸ್ ಠಾಣೆಯಲ್ಲಿ 2008ರಲ್ಲಿ ದಾಖಲಾಗಿದ್ದ ಪ್ರವೀಣ್ ಎಂಬವರ ಅಪಹರಣ, ದರೋಡೆ ಮತ್ತು ಕೊಲೆ ಪ್ರಕರಣದಲ್ಲಿ ದಿನಾಂಕ 28-02-2020ರಂದು ಮಾನ್ಯ ಹೈಕೋರ್ಟ್ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಲ್ಲದೆ, ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2008ರಲ್ಲಿ ನಡೆದ ದರೋಡೆ ಪ್ರಕರಣದಲ್ಲಿ 3 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಈತನ ವಿರುದ್ಧ ಇನ್ನೂ 13 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಬಾಕಿ ಇದ್ದು, ವಿವಿಧ ನ್ಯಾಯಾಲಯಗಳಿಂದ ಬಂಧನ ವಾರಂಟ್‌ಗಳು ಹೊರಡಿಸಲಾಗಿವೆ. 05 ಪ್ರಕರಣಗಳಲ್ಲಿ ನ್ಯಾಯಾಲಯವು ಎಲ್.ಪಿ.ಸಿ (Long Pending Case) ಎಂದು ಘೋಷಿಸಿದೆ.


2017ರಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲೆಕ್ಕಿ ಸಹ್ವಾನ್ ಎಂಬಾತನನ್ನು ಸಹಚರರೊಂದಿಗೆ ಅಪಹರಿಸಿ ಹಲ್ಲೆ ನಡೆಸಿ ಕೊಲೆಗೈದು, ಮೃತದೇಹವನ್ನು ಆಗುಂಬೆ ಘಾಟಿಯಲ್ಲಿ ಎಸೆದ ಪ್ರಕರಣದಲ್ಲಿಯೂ ಈತ ನೇರವಾಗಿ ಭಾಗಿಯಾಗಿದ್ದನು. ಬಳಿಕ ಪೊಲೀಸರ ಕೈಗೆ ಸಿಗದೆ ಪರಾರಿಯಾಗಿದ್ದ ಈತ, ಅಂಧ್ರಪ್ರದೇಶದ ರಾಯಚೋಟೆ ಪ್ರದೇಶದಲ್ಲಿ “ಉಮ್ಮರ್ ಮೊಹಮ್ಮದ್ ನಾಸಿರ್” ಎಂಬ ನಕಲಿ ಹೆಸರಿನಲ್ಲಿ ಆಧಾರ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಮಾಡಿಸಿಕೊಂಡು 2018ರಿಂದ ವಿದೇಶಗಳಿಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದನು.


ವಿದೇಶಗಳಲ್ಲಿ ವಾಸಿಸುತ್ತಿದ್ದ ಮಂಗಳೂರು ಮೂಲದ ವ್ಯಾಪಾರಸ್ಥರಿಗೆ ಬಲವಂತವಾಗಿ ಹಣ ವಸೂಲಿ ಮಾಡಿದ ಕುರಿತು ಸಹ ದೂರುಗಳು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಸಿಸಿಬಿ ಪೊಲೀಸರು ನಿಖರ ಮಾಹಿತಿ ಆಧರಿಸಿ ಅಂಧ್ರಪ್ರದೇಶದ ರಾಯಚೋಟೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಮುಲ್ಕಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಇದಲ್ಲದೆ, ಆರೋಪಿಗೆ ತಲೆಮರೆಸಿಕೊಳ್ಳಲು ಸಹಕರಿಸಿದವರು, ನಕಲಿ ದಾಖಲೆಗಳು ಹಾಗೂ ಪಾಸ್‌ಪೋರ್ಟ್ ಸಿದ್ಧಪಡಿಸಲು ನೆರವಾದ ವ್ಯಕ್ತಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!