ಧರ್ಮಸ್ಥಳ: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಮೂರು ಬೈಕ್ ಕಳ್ಳತನ ಮಾಡಲಾಗಿದೆ. ಫೆಬ್ರವರಿ 14 ರಂದು ಬುಧವಾರ ರಾತ್ರಿ ಮೂರು ಬೈಕ್‌ಗಳನ್ನು ಕಳವು ಮಾಡಲಾಗಿದ್ದು, ಇದರಲ್ಲಿ ಧರ್ಮಸ್ಥಳ ದೇಗುಲಕ್ಕೆ ಯಾತ್ರಾರ್ಥಿಯಾಗಿ ಬಂದ ಕೊಪ್ಪಳದ ವ್ಯಕ್ತಿಯೊಬ್ಬರ ಬೈಕ್ ಸಹ ಸೇರಿದೆ. ಇದು ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರಲ್ಲಿ ಸಹ ಆತಂಕಕ್ಕೆ ಕಾರಣವಾಗಿದೆ. ಜತೆಗೆ, ಧರ್ಮಸ್ಥಳ ಸುತ್ತಮುತ್ತಲ ನಿವಾಸಿಗಳಲ್ಲಿ ಕೂಡ ಭೀತಿಗೆ ಕಾರಣವಾಗಿದೆ.
ಮೊದಲ ಘಟನೆಯಲ್ಲಿ ಧರ್ಮಸ್ಥಳ ಗ್ರಾಮದ ನಿವಾಸಿ ಬೇಬಿ ಎಂಬವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಬೇಬಿ ಅವರು ಬೆಳಗ್ಗೆ ಎದ್ದು ನೋಡಿದಾಗ ಬೈಕ್ ನಿಲ್ಲಿಸಿದ್ದ ಸ್ಥಳದಿಂದ ಬೈಕ್ ಕಾಣೆಯಾಗಿತ್ತು.
ಎರಡನೇ ಘಟನೆಯಲ್ಲಿ, ಸುಳ್ಯದ ನಿವಾಸಿ ಅಖಿಲೇಶ್ ಎಂಬುವರು ಬೈಕ್ ಕಳೆದುಕೊಂಡಿದ್ದಾರೆ. ಧರ್ಮಸ್ಥಳದ ಗಡಿಭಾಗದ ಕಲ್ಮಂಜ ಗ್ರಾಮದ ಮದ್ಮಾಳ್ ಕಟ್ಟೆಯಲ್ಲಿರುವ ಸಂಬಂಧಿಕರ ಮನೆಗೆ ಆಗಮಿಸಿದ್ದರು. ಸಂಬಂಧಿಕರ ಮನೆ ಬಳಿ ಬೈಕ್ ನಿಲ್ಲಿಸಿದ್ದರು. ಆದರೆ, ಬೆಳಗ್ಗೆ ಪರಿಶೀಲಿಸಿದಾಗ ಕಾಣೆಯಾಗಿದೆ. ಬೈಕಿನ ಮೌಲ್ಯ 65,000 ರೂಪಾಯಿ ಎಂದು ಅಂದಾಜಿಸಲಾಗಿದೆ.
ಮತ್ತೊಂದು ಘಟನೆಯಲ್ಲಿ ಕೊಪ್ಪಳದಿಂದ ಧರ್ಮಸ್ಥಳಕ್ಕೆ ಆಗಮಿಸಿದ್ದ ಯಾತ್ರಾರ್ಥಿ ಬಸವರಾಜ್ ಎಂಬುವರು ಬೈಕ್ ಕಳೆದುಕೊಂಡಿದ್ದಾರೆ. ಧರ್ಮಸ್ಥಳದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕಿಯೋಸ್ಕ್ ಬಳಿ ಬೈಕ್ ನಿಲ್ಲಿಸಿ ಪಕ್ಕದಲ್ಲೇ ಮಲಗಿದ್ದರು. ಆದರೆ, ಬೆಳಗ್ಗೆ ಎದ್ದು ನೋಡಿದಾಗ ಬೈಕ್ ಕಳ್ಳತನವಾಗಿರುವುದು ಕಂಡು ಬೆಚ್ಚಿಬಿದ್ದಿದ್ದಾರೆ.
ಒಂದೇ ಕಳ್ಳರ ತಂಡವೇ ದಾಳಿ ಮಾಡಿರಬೇಕು ಮತ್ತು ಮೂರು ಬೈಕ್‌ಗಳನ್ನು ಪ್ರತ್ಯೇಕ ಘಟನೆಗಳಲ್ಲಿ ಕಳ್ಳತನ ಮಾಡಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.