

ಬೆಂಗಳೂರು: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗಾಗಿ ಇಂದು ಸಂಜೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಬಹಿರಂಗ ಅಖಾಡದ ಅವಧಿ ಅಂತ್ಯವಾಗುತ್ತಿದ್ದಂತೆ ಮತದಾನಕ್ಕೆ ಉಳಿದ ಸಮಯವನ್ನು ಶೂನ್ಯ ಅವಧಿ ಎಂದು ಚುನಾವಣಾ ಆಯೋಗವು ಪರಿಗಣಿಸುತ್ತದೆ. ಈ ಅವಧಿಯಲ್ಲಿ ಇನ್ನೇನಿದ್ದರು ಮನೆ ಬಾಗಿಲಿಗೆ ಬಂದು ಮತಯಾಚನೆ ಮಾತ್ರ ಉಳಿದಿದೆ.
ಇಂದು ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು ಸಮಾವೇಶ, ರೋಡ್ ಶೋ, ಉತ್ಸವ, ರ‍್ಯಾಲಿ ಮತ್ತು ಧ್ವನಿ ವರ್ಧಕಗಳ ಬಳಕೆಗೆ ನಿರ್ಬಂಧ ಹೇರಲಾಗಿದೆ. ಮತದಾನ ಮೇ ೧೦ ರಂದು ನಡೆಯಲಿದ್ದು ಚುನಾವಣಾ ಆಯೋಗದ ಮಾರ್ಗ ಸೂಚಿ ಪ್ರಕಾರ ಅದಕ್ಕಿಂತ 48 ತಾಸು ಮುನ್ನ ಬಹಿರಂಗ ಪ್ರಚಾರ ಅಂತ್ಯ ಗೊಳ್ಳಬೇಕು. ಈ 48 ತಾಸು ಅವಧಿಯನ್ನು “ಮೌನ ಅವಧಿ’ ಎನ್ನಲಾಗುತ್ತದೆ. ಈ ಅವಧಿಯಲ್ಲಿ ಬಹಿರಂಗ ಪ್ರಚಾರಕ್ಕೆ ಅವಕಾಶವಿಲ್ಲ. ಪಕ್ಷದ ಸ್ಟಾರ್ ಪ್ರಚಾರಕರು ಮತ್ತು ಕ್ಷೇತ್ರದ ಮತದಾರಲ್ಲದವರು ಮೇ 8ರ ಸಂಜೆ 6ರ ಬಳಿಕ ಕ್ಷೇತ್ರ ಬಿಟ್ಟು ತೆರಳ ಬೇಕು. ಅದರಂತೆ ಮಾಜಿ ಪ್ರಧಾನಿ ನರೇಂದ್ರ ಮೋದಿ ರವಿವಾರ ಪ್ರಚಾರ ಅಂತ್ಯಗೊಳಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಸೋಮವಾರವೂ ಬಹಿರಂಗ ಪ್ರಚಾರ ನಡೆಸಲಿದ್ದಾರೆ.
ಮನೆ-ಮನೆ ಪ್ರಚಾರಕ್ಕೆ ಗಮನ
ಮೇ 8ರ ಸಂಜೆ 6ರಿಂದ ಮೇ 10ರಂದು ಮತದಾನದ ಅವಧಿ ಮುಕ್ತಾಯವಾಗುವ ತನಕ “ಸೈಲೆಂಟ್ ಪಿರಿಯಡ್’, “ಡ್ರೈ ಡೇ’ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಬಹಿರಂಗ ಪ್ರಚಾರ ಮತ್ತು ಧ್ವನಿವರ್ಧಕಗಳ ಬಳಕೆಗೆ ನಿಷೇಧವಿರುತ್ತದೆ. ಜತೆಗೆ ಪ್ರತೀ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗುತ್ತದೆ. 5ಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಆದರೆ ಮನೆ- ಮನೆ ಪ್ರಚಾರಕ್ಕೆ ಇದು ಅನ್ವಯವಾಗುವುದಿಲ್ಲ. ಮನೆ-ಮನೆ ಪ್ರಚಾರದ ವೇಳೆಯಲ್ಲೂ ಚುನಾವಣ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಪ್ರತಿಸ್ಪರ್ಧಿಗಳ ಬಗ್ಗೆ ವೈಯಕ್ತಿಕ ಟೀಕೆ, ನಿಂದನೆ ಮಾಡುವಂತಿಲ್ಲ, ದ್ವೇಷದ ಮಾತುಗಳು, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮಾತುಗಳಿಗೆ ನಿರ್ಬಂಧವಿರಲಿದೆ.
ಮುದ್ರಣ ಜಾಹೀರಾತಿಗೆ ಅನುಮತಿ ಕಡ್ಡಾಯ
ಮೇ-10 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾನ ಮುಕ್ತಾಯ ಸಮಯದ ಪೂರ್ವ 48 ಗಂಟೆ ಅವಧಿಯಲ್ಲಿ ಅಂದರೆ (ಮೇ-9 ಮತ್ತು ಮೇ-10 ರಂದು) ಯಾವುದೇ ರಾಜಕೀಯ ಪಕ್ಷ, ಅಭ್ಯರ್ಥಿ, ಸಂಘ-ಸಂಸ್ಥೆ, ವ್ಯಕ್ತಿಗತವಾಗಿ ಮುದ್ರಣ ಮಾಧ್ಯಮದಲ್ಲಿ ಚುನಾವಣೆಗೆ ಸಂಬಂಧಿಸಿದ ಜಾಹೀರಾತು ಪ್ರಕಟಿಸಬೇಕಾದಲ್ಲಿ ಸಂಬಂಧಿಸಿದ ಜಿಲ್ಲಾ ಅಥವಾ ರಾಜ್ಯ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯಿಂದ ಪೂರ್ವಾನುಮತಿ ಪಡೆಯವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.
ಇನ್ನು ಪತ್ರಿಕೆಗಳು ಮೇ 9 ಮತ್ತು 10 ರಂದು ಯಾವುದೇ ಚುನಾವಣಾ ಜಾಹಿರಾತುಗಳನ್ನು ಪ್ರಕಟಿಸುವ ಮುನ್ನ ಎಂ.ಸಿ.ಎಂ.ಸಿ ಸಮಿತಿಯಿಂದ ಪೂರ್ವಾನುಮತಿ ಪಡೆಯಲಾಗಿದಿಯೇ ಎಂಬುದನ್ನು ಖಾತ್ರಿಪಡಿಸಿಕೊಂಡ ಬಳಿಕವೇ ಜಾಹೀರಾತು ಪ್ರಕಟಿಸಬೇಕು. ಅನುಮತಿ ಇಲ್ಲದೆ ಹೋದಲ್ಲಿ ಜಾಹೀರಾತು ಪ್ರಕಟಿಸುವಂತಿಲ್ಲ. ಮತದಾನದ ಪೂರ್ವ 72 ಗಂಟೆ ಅವಧಿಯಲ್ಲಿ ಬಿತ್ತರಿಸುವ ಸುದ್ದಿ, ಪ್ರಸಾರಗಳ ಮೇಲೆ ಚುನಾವಣಾ ಆಯೋಗ ತೀವ್ರ ನಿಗಾ ವಹಿಸಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.