




ಹಾಸನ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಹಾಸನ-ಶಿರಾಡಿ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದಾಗಿ ರಾತ್ರಿ ಬೆಂಗಳೂರಿನಿಂದ ಹೊರಟಿದ್ದ ಬಸ್ ಸಹಿತ ಸಾರ್ವಜನಿಕ ವಾಹನಗಳು ಸಕಲೇಶಪುರ, ದೋಣಿಗಲ್ ಭಾಗದಲ್ಲಿಯೇ ನಿಲ್ಲುವಂತಾಗಿದೆ. ನಿಧಾನಗತಿಯಲ್ಲಿ ವಾಹನಗಳು ಸಾಗುತ್ತಿದ್ದು ಮುಂಜಾನೆ ತಲುಪಬೇಕಿದ್ದ ಬಸ್‌ಗಳು ಗಂಟೆ 9 ಆದರೂ ಶಿರಾಡಿ ದಾಟಲು ಸಾಧ್ಯವಾಗಿಲ್ಲ.
ಆನೆ ಮಹಲ್ ಬಳಿ ರಸ್ತೆ ದುರಸ್ತಿ ಕಾರ್ಯವೂ ನಡೆಯುತ್ತಿದ್ದು, ಈಗಾಗಲೇ ಕಾಮಗಾರಿಯಲ್ಲಿರುವ ಹೊಸ ರಸ್ತೆಗೆ ಮಣ್ಣು, ಜಲ್ಲಿ ಹಾಕಲಾಗಿದೆ. ಇದರಿಂದ ವಾಹನಗಳು ಅಲ್ಲಲ್ಲಿ ಹೂತು ಹೋಗುತ್ತಿವೆ. ಈ ಕಾರಣಕ್ಕಾಗಿ ರಾತ್ರಿ 3 ಗಂಟೆಯಿಂದಲೇ ಸಂಚಾರ ದಟ್ಟಣೆ ಸಮಸ್ಯೆ ಎದುರಾಗಿದೆ. ಮುಂಜಾನೆ 6 ಗಂಟೆ ವೇಳೆಗೆ ಮಂಗಳೂರು ತಲುಪಬೇಕಿದ್ದ ವಾಹನಗಳು ಸಕಲೇಶಪುರ ದಾಟಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು. ಒಂದೆಡೆ ಮಳೆಯೂ ಆಗುತ್ತಿದ್ದು, ವಾಹನಗಳ ಓಡಾಟ ಹಾಗೂ ರಸ್ತೆ ದುರಸ್ತಿಗೂ ಭಾರೀ ತೊಡಕು ಉಂಟು ಮಾಡಿತ್ತು.
ಅದೇ ರೀತಿ ಮಂಗಳೂರಿನಿಂದ ಬೆಂಗಳೂರು ಹೊರಟಿದ್ದ ವಾಹನಗಳು ಕೂಡಾ ಶಿರಾಡಿ ಘಾಟ್ ದಾಟುತ್ತಲೇ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವಂತಾಯಿತು. ಇದರಿಂದಾಗಿ ಬೆಂಗಳೂರು ತಲುಪಬೇಕಾದ ಕೆಲ ವಾಹನಗಳು ತಡವಾಗಿ ತಲುಪಬೇಕಾಗಿದೆ. ಶಿರಾಡಿ ಘಾಟ್ ರಸ್ತೆಯು ಬೆಂಗಳೂರು-ಮಂಗಳೂರು ಸಂಪರ್ಕದ ಪ್ರಮುಖ ರಸ್ತೆಯಾಗಿದೆ.