

ಮಣಿಪಾಲ : ಉಡುಪಿ ಜಿಲ್ಲೆಯ ಉತ್ಸಾಹಿ ಸಾಹಸಿ ಬೈಕ್ ಕ್ರೀಡಾಳುಗಳಾದ ಖ್ಯಾತ ಯೂಟ್ಯೂಬರ್ ಶಟರ್‌ಬಾಕ್ಸ್ ಫಿಲ್ಮ್ಸ್ ಪ್ರಾಯೋಜಕ ಸಚಿನ್ ಮತ್ತು ಮಣಿಪಾಲದ ಯುವ ಉದ್ಯಮಿ, ಸಾಹಸ ಬೈಕಿಂಗ್ ಕ್ರೀಡಾಪಟು ಅರ್ಜುನ್ ಪೈ ಅವರು ಬೈಕ್ ಪ್ರವಾಸ ಕೈಗೊಂಡು ಇಂಡೋ ಚೀನ ಗಡಿ ಪ್ರದೇಶದ 15,300 ಅಡಿ ಎತ್ತರದ ಝುಪಾಕ್‌ನಲ್ಲಿ ತುಳುನಾಡ ಧ್ವಜವನ್ನು ಹಾರಿಸಿ ತುಳು ಪ್ರೇಮ ಮೆರೆದಿದ್ದಾರೆ.

ಅವರು ದಿಲ್ಲಿಯಿಂದ ಪ್ರಾರಂಭಿಸಿದ ಬೈಕ್ ಪ್ರವಾಸದಲ್ಲಿ 1,900 ಕಿ.ಮೀ. ದೂರ ಕ್ರಮಿಸಿ ಹಿಕ್ಕಿಮ್, 12,270 ಅಡಿ ಎತ್ತರದ (ವಿಶ್ವದ ಅತೀ ಎತ್ತರದಲ್ಲಿರುವ ಪೋಸ್ಟ್ ಆಫೀಸ್) ಮತ್ತು 11,320 ಎತ್ತರದ ಇಂಡೋ ಚೈನಾ ಗಡಿ ಕೊನೆಯ ಗ್ರಾಮವಾದ ಚಿಕ್‌ಟುಲ್ ಗ್ರಾಮಕ್ಕೂ ಭೇಟಿ ಇತ್ತರು. ಬೈಕ್ ಯಾತ್ರಾ ತಂಡದಲ್ಲಿ ಅನ್ನಿ ಅರುಣ್ ಮತ್ತು ಸಾಯಿ ಇದ್ದರು. ಅರ್ಜುನ್ ಮತ್ತುಸಚಿನ್ ದಿಲ್ಲಿಯಿಂದ ಮಾ.1ರಿಂದ ಬೈಕ್ ಯಾತ್ರೆಯನ್ನು ಪ್ರಾರಂಭಿಸಿ 1,900 ಕಿ.ಮೀ. ಕ್ರಮಿಸಿ ಸಿಲಿಗುರಿಯನ್ನು ತಲುಪಿದರು.
ಮೊದಲ ಹಂತದ ಬೈಕ್ ಯಾತ್ರೆಯಲ್ಲಿ ದೇಶದಾದ್ಯಂತ ಆಗಮಿಸಿದ 15 ಬೈಕರ್‌ಗಳ ತಂಡ ಪಾಲ್ಗೊಂಡಿತ್ತು. ಮಾ. 16ರಿಂದ ಹಿಮಾಚಲ ಪ್ರದೇಶದ ದುರ್ಗಮ ಹಿಮಚ್ಛಾದಿತ ಪ್ರದೇಶಗಳಲ್ಲಿ ಬೈಕ್ ಯಾತ್ರೆಯನ್ನು ಉಡುಪಿಯ ಯುವಕರ ತಂಡ ಮುಂದುವರಿಸಿದೆ.

