




ತುಮಕೂರು: ನಾಪತ್ತೆಯಾಗಿದ್ದ ಮಹಿಳೆ ಮೂರು ದಿನಗಳ ಬಳಿಕ ಅದೇ ಗ್ರಾಮದ ವ್ಯಕ್ತಿಯೊಬ್ಬರ ತೆಂಗಿನ ತೋಟದಲ್ಲಿ ಕೊಳೆತ ಶವವಾಗಿ ಪತ್ತೆಯಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದ್ದು, ಚೆನ್ನಮ್ಮ ಮೃತಪಟ್ಟ ಮಹಿಳೆ.
ಮೇ 7ರ ಸಂಜೆ ಸುಮಾರು 5.30ಕ್ಕೆ ಮನೆಯಿಂದ ಹೊರ ಹೋದ ಚೆನ್ಮಮ್ಮ ಮನೆಗೆ ವಾಪಾಸ್ಸಾಗಿರಲಿಲ್ಲ. ಆಕೆಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಈ ಮಧ್ಯೆ ಯಾರ ಸಹವಾಸಕ್ಕೂ ಹೋಗದ ಚೆನ್ನಮ್ಮ ಇಂದು ಗ್ರಾಮದ ವ್ಯಕ್ತಿಯೊಬ್ಬರ ತೆಂಗಿನ ತೋಟದಲ್ಲಿ ಶವವಾಗಿ ಪತ್ತೆಯಾಗಿರುವುದು ಕುಟುಂಬಸ್ಥರಿಗೆ ಆಘಾತ ಉಂಟುಮಾಡಿದೆ.
ಮೃತ ಚೆನ್ನಮ್ಮ ದಲಿತ ಮಹಿಳೆಯಾಗಿದ್ದು, ಮೇಲ್ವರ್ಗದವರ ಜಮೀನಿನೊಳಗೆ ಬಂದಿದ್ದ ಈಕೆಯನ್ನು ಕೊಲೆ ಮಾಡಿರಬಹುದೆಂಬ ಆರೋಪ ಕೇಳಿಬಂದಿದೆ. ಆದರೆ ಸ್ಥಳಕ್ಕೆ ಭೇಟಿ ನೀಡಿದ್ದ ಹೊನ್ನವಳ್ಳಿ ಪೊಲೀಸರ ಸಹಿತ ಮೇಲಾಧಿಕಾರಿಗಳು ಇದು ಅಸಹಜ ಸಾವೆಂದು ಅನುಮಾನಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಹೊನ್ನವಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಾಥಮಿಕ ತನಿಖೆಯಲ್ಲಿ, ಹಾವು ಕಚ್ಚಿಯೋ ಅಥವಾ ಆಕಸ್ಮಿಕವಾಗಿ ಕುಸಿದು ನೆಲಕ್ಕೆ ಬಿದ್ದೋ ಮೃತಪಟ್ಟಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಜತೆಗೆ ಮೃತರ ದೇಹದ ಮೇಲಿದ್ದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ಈ ನಡುವೆಯೂ ಕುಟುಂಬಸ್ಥರ ಆರೋಪ ಹಿನ್ನೆಲೆ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು,ಮೃತದೇಹವನ್ನು ಮರಣೋತ್ತರ ಪರಿಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಮೇಲೆಯೇ ಸಾವಿನ ನಿಖರ ಕಾರಣ ತಿಳಿಯಬೇಕಾಗಿದೆ ಎಂಬುದಾಗಿ ವರದಿ ಮೂಲಕ ತಿಲಿದುಬಂದಿದೆ.








