


ಭಾರತೀಯ ರಾಯಭಾರಿ ಕಚೇರಿಯಿಂದ ಕರೆ ಮಾಡುವುದಾಗಿ ಹೇಳಿ ಅಪರಿಚಿತ ವ್ಯಕ್ತಿ ಐರ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಉಡುಪಿ ಮೂಲದ ವಿದ್ಯಾರ್ಥಿಯಿಂದ ಹಣ ಪಡೆದು ವಂಚಿಸಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿನ್ನಿಮುಲ್ಕಿಯ ಶ್ರೀಕಾಂತ್ ಎಂಬವರ ಮಗ ಸಂದೇಶ್(25) 2024ರಿಂದ ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಎಂಎಸ್ ವಿಧ್ಯಾಭ್ಯಾಸವನ್ನು ಮಾಡುತ್ತಿದ್ದು, ಜೂ.30ರಂದು ಅಪರಿಚಿತ ವ್ಯಕ್ತಿಯು ಭಾರತೀಯ ರಾಯಭಾರಿ ಕಚೇರಿ ಯಿಂದ ಕರೆ ಮಾಡುವುದಾಗಿ ಹೇಳಿ, ನೀವು ಐರ್ಲೆಂಡ್‌ನಲ್ಲಿ ಸಲ್ಲಿಸಿದ ಐಆರ್‌ಬಿ ಅರ್ಜಿಯಲ್ಲಿ ನಮೂದಿಸಿದ ಜನ್ಮ ದಿನಾಂಕವು ತಪ್ಪಾಗಿದ್ದು, ಕೂಡಲೇ ಸರಿಪಡಿಸಿಕೊಳ್ಳಬೇಕೆಂದು ತಿಳಿಸಿದ್ದನು.ದಾಖಲೆಗಳು ಸಲ್ಲಿಸಿದ ಬಳಿಕ ಆತ ಮತ್ತೆ ಕರೆ ಮಾಡಿ, ಭದ್ರತೆಗೋಸ್ಕರ ವಿವಿಧ ಹಂತಗಳಲ್ಲಿ ಹಣವನ್ನು ವಿವಿಧ ಅಕೌಂಟ್ ನಂಬರ್‌ಗಳಿಗೆ ಪಾವತಿಸಲು ತಿಳಿಸಿದ್ದನು. ಅದರಂತೆ ಸಂದೇಶ್ ಆ ಖಾತೆಗಳಿಗೆ 58,533ರೂ. ವರ್ಗಾವಣೆ ಮಾಡಿದ್ದರು. ಬಳಿಕ ಸಂದೇಶ್ ತಂದೆಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಅವರು 33,588ರೂ. ಮತ್ತು 67,075ರೂ. ಹಣವನ್ನು ವರ್ಗಾವಣೆ ಮಾಡಿದ್ದರು.
ಆರೋಪಿ ಸಂದೇಶ್ ಅವರಲ್ಲಿ ಮತ್ತೆ ಹಣ ಪಾವತಿಸುವಂತೆ ಪೀಡಿಸಿದ್ದನು. ಹೀಗೆ ಅಪರಿಚಿತ ವ್ಯಕ್ತಿಯು ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡು ನಂಬಿಸಿ ಮೋಸ ಮಾಡಿರುವುದಾಗಿ ದೂರಲಾಗಿದೆ.