


ಉಡುಪಿ: ಮದುವೆಯಾಗುವುದಾಗಿ ನಂಬಿಸಿ ಕೊಳಲಗಿರಿ ನಿವಾಸಿ ಯುವತಿಯ ಮೇಲೆ ಅತ್ಯಾಚಾರ ಎಸಗಿ, ನಂತರ ಬೇರೊಬ್ಬ ಯುವತಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿದ್ದ ಆರೋಪದ ಮೇಲೆ ಉಡುಪಿ ಮಹಿಳಾ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕೊಳಲಗಿರಿ ಗ್ರಾಮದ ನರ್ನಾಡುಗುಡ್ಡೆ, ಲಕ್ಷ್ಮೀನಗರ ನಿವಾಸಿ ಸಂಜಯ್ ಕರ್ಕೇರ (28) ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟನೆಯ ಹಿನ್ನೆಲೆ:
ಸಂತ್ರಸ್ತೆಯು ನೀಡಿದ ದೂರಿನ ಪ್ರಕಾರ, ಆಕೆ ಮತ್ತು ಆರೋಪಿ ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. 2024ರ ಜುಲೈ 11 ರಂದು ಆರೋಪಿಯೊಂದಿಗೆ ಆಕೆ ಟ್ರಕ್ಕಿಂಗ್‌ಗಾಗಿ ಕಳಸಕ್ಕೆ ತೆರಳಿದ್ದಳುದ್ದಳು. ಟ್ರಕ್ಕಿಂಗ್ ಮುಗಿದ ನಂತರ, ಆರೋಪಿ ಆಕೆಗೆ ಜ್ಯೂಸ್ ಕುಡಿಸಿದ್ದಾನೆ. ಇದರಿಂದ ಆಕೆ ಅರೆಪ್ರಜ್ಞಾವಸ್ಥೆಗೆ ತಲುಪಿದ್ದು, ನಂತರ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.
ನಂತರ ಆರೋಪಿಯು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಶೃಂಗೇರಿಯ ದೇವಾಲಯಕ್ಕೆ ಕರೆದೊಯ್ದಿದ್ದ. ಅಲ್ಲಿ ಸಿಂಧೂರವಿಟ್ಟು, ಹೂವಿನ ಹಾರವನ್ನು ಹಾಕಿ, ತಾವು ಮದುವೆಯಾದಂತೆ ಬಿಂಬಿಸಿದ್ದಾನೆ. ಮುಂದೆ ತನ್ನ ಮನೆಯವರನ್ನು ಒಪ್ಪಿಸಿ ಔಪಚಾರಿಕವಾಗಿ ಮದುವೆಯಾಗುವುದಾಗಿ ಆತ ಭರವಸೆ ನೀಡಿದ್ದನು. ಆ ಬಳಿಕ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ನೀಡಿರುವ ದೂರಿನಲ್ಲಿ ಉಲ್ಲೇಸಿದ್ದಾರೆ.
ಇದೀಗ ಉಡುಪಿ ಮಹಿಳಾ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪ್ರಕರಣದ ಮುಂದಿನ ತನಿಖೆ ನಡೆಯುತ್ತಿದೆ.