


ಉಡುಪಿ: ಹೊಸದಿಲ್ಲಿ ಕೇಂದ್ರಿತವಾಗಿ ಉಡುಪಿಯೂ ಸೇರಿದಂತೆ ದೇಶದ ನಾಲ್ಕು ನಗರಗಳ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತಿದ್ದ ಬೃಹತ್ ಅಕ್ರಮ ಫಾರ್ಮಸ್ಯೂಟಿಕಲ್ ಡ್ರಗ್ ಜಾಲವನ್ನು ಭಾರತದ ಮಾದಕದ್ರವ್ಯ ನಿಯಂತ್ರಣ ಬ್ಯುರೋ (ಎನ್ಸಿಬಿ) ಬೇಧಿಸಿದ್ದು, ದೇಶದ ವಿವಿಧೆಡೆಗಳಲ್ಲಿ ಒಟ್ಟು ಎಂಟು ಮಂದಿಯನ್ನು ಬಂಧಿಸಿದೆ.
ಬಂಧಿತರಲ್ಲಿ ಉಡುಪಿಯ ಕಾಲ್ಸೆಂಟರ್ ಒಂದರ ತಮಿಳುನಾಡು ಮೂಲದ ನಿರ್ವಾಹಕನೂ ಸೇರಿದ್ದಾನೆ. ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ವ್ಯಾಪಿಸಿರುವ ಈ ಬೃಹತ್ ಅಕ್ರಮ, ನಿಷೇಧಿತ ಮಾದಕ ದ್ರವ್ಯಗಳ ಮಾರಾಟ ಜಾಲಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಿದ್ದರೆ, ವಿವಿಧೆಡೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಐದು ಮಾದಕದ್ರವ್ಯ ಸರಕು ಸಾಗಾಟವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಸಿಬಿ ಹೇಳಿಕೆಯಲ್ಲಿ ತಿಳಿಸಿದೆ. ಇದರಲ್ಲಿ ಆಧುನಿಕ ಅಕ್ರಮ ವ್ಯವಹಾರ ಜಗತ್ತು ಬಳಸುವ ಎಲ್ಲಾ ತಾಂತ್ರಿಕತೆಯನ್ನು -ಡಿಜಿಟಲ್ ಪ್ಲಾಟ್ಫಾರಂ, ಕ್ರಿಫ್ಟೋ ಕರೆನ್ಸಿ, ನಿಯಂತ್ರಿತ ಮೆಡಿಸಿನ್ನ ಕಳ್ಳಸಾಗಣಿಕೆ- ಬಳಸಿಕೊಳ್ಳಲಾಗಿತ್ತು ಎಂದಿದೆ. ‘ಆಪರೇಷನ್ ಮೆಡ್ ಮ್ಯಾಕ್ಸ್’ ಎಂಬ ಹೆಸರಿನಲ್ಲಿ ಎನ್ಸಿಬಿ ಕಾರ್ಯಾಚರಣೆ ನಡೆಸಿತ್ತು. ಭಾರತದಲ್ಲಿ ಇದು ಹೊಸದಿಲ್ಲಿ ಕೇಂದ್ರಿತವಾಗಿ ಉಡುಪಿ, ರೂರ್ಕಿ ಹಾಗೂ ಜೈಪುರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ಈ ನಾಲ್ಕು ಕೇಂದ್ರಗಳಲ್ಲಿ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಅಕ್ರಮ ಚಟುವಟಿಕೆಯ ಕುರಿತು ಸುಳಿವು ನೀಡದಿರಲು ದೇಶದ ನಾಲ್ಕು ಮೂಲೆಗಳಲ್ಲಿ ಒಂದೊಂದು ಕಾರ್ಯಾಚರಣೆಯನ್ನು ನಡೆಸಲಾಗುತಿತ್ತು. ಇದರಲ್ಲಿ ಉಡುಪಿಯಲ್ಲಿ ಇದಕ್ಕೆ ಸಂಬಂಧಿಸಿದ ಕಾಲ್ಸೆಂಟರ್ ಕಾರ್ಯ ನಿರ್ವಹಿಸುತ್ತಿತ್ತು. ಡ್ರಗ್ ಸಾಗಾಟವಾಗಲಿ, ಸಂಗ್ರಹವಾಗಲಿ ಯಾವುದೂ ಇಲ್ಲಿ ನಡೆಯುತ್ತಿರಲಿಲ್ಲ. ಇಲ್ಲಿನ ಕಾಲ್ಸೆಂಟರ್ ಮೂಲಕ ವಿಶ್ವದ ಮೂಲೆ ಮೂಲೆಯ ಸಂಪರ್ಕ, ಮಾಹಿತಿ ಇಲ್ಲಿಗೆ ಬರುತಿತ್ತು. ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಹಯಗ್ರೀವ ನಗರದ 7ನೇ ಕ್ರಾಸ್ನಲ್ಲಿ ‘ಮೆಡ್ಮ್ಯಾಕ್ಸ್ ಡಿಜಿಟಲ್’ ಎಂಬ ಈ ಕಾಲ್ಸೆಂಟರ್ ಕಾರ್ಯನಿರ್ವಹಿಸುತ್ತಿತ್ತು. ಇದನ್ನು ನಿರ್ವಹಿಸುತಿದ್ದ ಸುರೇಶ್ ಕುಮಾರ್ ಕೆ. ಎಂಬಾತನನ್ನು ಎನ್ಸಿಬಿಯ ಅಧಿಕಾರಿಗಳು ಒಂದು ತಿಂಗಳ ಹಿಂದೆಯೇ ಬಂಧಿಸಿ ದಿಲ್ಲಿಗೆ ಕರೆದೊಯ್ದಿದ್ದರು.