ನವದೆಹಲಿ : ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಸಮುದಾಯದ ಸದಸ್ಯನಿಂದ ಮೊಕದ್ದಮೆ ಹೂಡಲಾಗಿದೆ ಎಂಬ ಮಾತ್ರಕ್ಕೆ ಮೇಲ್ಜಾತಿಗೆ ಸೇರಿದ ವ್ಯಕ್ತಿಯು ತನ್ನ ಕಾನೂನಾತ್ಮಕ ಹಕ್ಕುಗಳನ್ನು ಚಲಾಯಿಸುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ದೌರ್ಜನ್ಯಗಳಿಂದ ಎಸ್‌ಸಿ/ಎಸ್‌ಟಿ ಸಮುದಾಯವನ್ನು ರಕ್ಷಿಸುವ ಕಾನೂನಿನ ವ್ಯಾಖ್ಯಾನದ ಕುರಿತಾಗಿ ಸುಪ್ರೀಂಕೋರ್ಟ್ ಶುಕ್ರವಾರ ಈ ಮಹತ್ತರ ಅಭಿಪ್ರಾಯ ವ್ಯಕ್ತಪಡಿಸಿದೆ. ದೂರುದಾರ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾನೆ ಎಂಬ ಕಾರಣಕ್ಕಾಗಿಯಷ್ಟೇ ಯಾವುದೇ ವ್ಯಕ್ತಿಯನ್ನು ದಂಡನೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.

ಸಂತ್ರಸ್ತನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಾನೆ ಎಂಬ ಕಾರಣದಿಂದ ಆ ಸಮುದಾಯದ ಸದಸ್ಯನನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಉದ್ದೇಶವಿರದೆ ಇದ್ದರೆ, ದೂರು ನೀಡಿದ ವ್ಯಕ್ತಿಯು ಎಸ್‌ಸಿ ಅಥವಾ ಎಸ್‌ಟಿಗೆ ಸಮುದಾಯದ ಸದಸ್ಯ ಎಂಬ ಸಂಗತಿಯ ಕಾರಣದಿಂದ ಮಾತ್ರವೇ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಅಪರಾಧ ಎಂದು ಪರಿಗಣಿಸಲು ಆಗುವುದಿಲ್ಲ’ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
