ಪ್ರಸಿದ್ಧ ಮೂಳೆ ಶಸ್ತ್ರ ಚಿಕಿತ್ಸಾ ತಜ್ಞ ಹಾಗೂ ಧಾರ್ಮಿಕ , ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಖ್ಯಾತರಾಗಿರುವ ಡಾ.ರವೀಂದ್ರ ನಾರಾಯಣ್ ಸಿಂಗ್ ಅವರು ಶನಿವಾರ ವಿಶ್ವ ಹಿಂದು ಪರಿಷತ್ (ವಿಹಿಂಪ)ನ ನೂತನ ರಾಷ್ಟ್ರಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಫರೀದಾಬಾದ್‌ನಲ್ಲಿ ನಡೆದ ವಿಹಿಂಪದ ಎರಡು ದಿನಗಳ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಬಿಹಾರದ ಮೂಲದವರಾದ ಡಾ.ಸಿಂಗ್ ಈ ವರೆಗೂ ಸಂಘಟನೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿತ್ತಿದ್ದರು. ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿನ ಅವರ ಅಸಾಮಾನ್ಯ ಕೊಡುಗೆಗಾಗಿ 2010ರಲ್ಲಿ ಅವರಿಗೆ ಪದ್ಮಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಸಿಂಗ್ ಅವರನ್ನು ಸಂಘಟನೆಯ ರಾಷ್ಟ್ರಧ್ಯಕ್ಷರನ್ನಾಗಿ ಟ್ರಸ್ಟಿಗಳ ಮಂಡಳಿ ಅವಿರೋಧವಾಗಿ ಆಯ್ಕೆ ಮಾಡಿದೆ . ಇಂತಹ ಹಿರಿಯ ಸಾಧಕರೊಬ್ಬರು ವಿಹಿಂಪ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವುದು ನಮಗೆ ಹೆಮ್ಮೆ ಎಂಬುದಾಗಿ ವಿಹಿಂಪದ ಜಂಟಿ ಪ್ರಧಾನ ಕಾಯದರ್ಶಿ ಸುರೇಂದ್ರ ಜೈನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

2018ರಿಂದ ವಿಹಿಂಪ ಅಧ್ಯಕ್ಷರಾಗಿದ್ದ ವಿಷ್ಣು ಸದಾಶಿವ್ ಕೊಕ್ಜೆ ಅವರು 82 ವರ್ಷ ವಯಸ್ಸಾಗಿರುವ ಕಾರಣದಿಂದಾಗಿ ತಮ್ಮ ಜವಾಬ್ದಾರಿಯನ್ನು ಹೊಸಬರಿಗೆ ವಹಿಸಲು ಮುಂದಾಗಿದ್ದರಿಂದ ಈ ಆಯ್ಕೆ ನಡೆದಿದೆ.

ಕೊಕ್ಜೆ ಅವರ ಅಪೇಕ್ಷೆಯಂತೆ ಸಂವಿಧಾನಬದ್ಧವಾಗಿ ಚುನಾವಣೆ ನಡೆಸಿ ಡಾ.ರವೀಂದ್ರ ನಾರಾಯಣ್ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಧಾನ ಕಾರ್ಯದರ್ಶಿ ಹುದ್ದೆಗೂ ಚುನಾವಣೆ ನಡೆಡಿದ್ದು ಹಾಲಿ ಪ್ರಧಾನಕಾರ್ಯದರ್ಶಿ ಮಿಲಿಂದ್ ಪರಾಂಡೆ ಅವರೇ ಪುನರಾಯ್ಕೆಯಾಗಿದ್ದಾರೆ.

