ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಒಕ್ಕೆತ್ತೂರು ಸುರುಂಬಡ್ಕ ಕಿಂಡಿ ಅಣೆಕಟ್ಟೆಯಲ್ಲಿ ಮರದ ದಿಮ್ಮಿ ಹಾಗೂ ಕಸಗಳು ಸಿಕ್ಕಿಹಾಕಿಕೊಂಡು ಅಣೆಟ್ಟನ್ನು ಹಾನಿಗೊಳಿಸಿದ್ದು, ನೀರು ಹರಿದು ಹೋಗಲು ಸ್ಥಳೀಯರು ಶ್ರಮದಾನಗಳ ಮೂಲಕ ದಿಮ್ಮಿಗಳನ್ನು ತೆರವುಗೊಳಿಸಿ ವ್ಯವಸ್ಥೆ ಮಾಡಿದರು.
ವಿಟ್ಲ ಕಸಬಾ ಗ್ರಾಮದ ಸುರುಂಬಡ್ಕ ಎಂಬಲ್ಲಿ ನಾಲ್ಕು ವರ್ಷದ ಹಿಂದೆ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಕಿಂಡಿ ಅಣೆಅಟ್ಟು ನಿರ್ಮಿಸಲಾಗಿತ್ತು. ಮಳೆಗಾಲದಲ್ಲಿ ಒಕ್ಕೆತ್ತೂರು ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಾಳವಾಗುತ್ತಿದ್ದು, ನೀರಿನ ಜತೆ ಮರದ ದಿಮ್ಮಿಗಳು, ಇನ್ನಿತರ ವಸ್ತುಗಳು ಬಂದು ಒಕ್ಕೆತ್ತೂರು ಹೊಳೆಯ ಸುರುಂಬಡ್ಕದಲ್ಲಿರುವ ಕಿಂಡಿ ಅಣೆಕಟ್ಟೆಯಲ್ಲಿ ನಿಲ್ಲುತ್ತಿದೆ. ಇದರಿಂದ ಅಣೆಟ್ಟೆಯ ಎಲ್ಲಾ ಗಂಡಿಗಳು ಬಂದ್ ಆಗಿದೆ. ಅಣೆಕಟ್ಟು ಜೋರಾಗಿ ಮಳೆ ಬಂದಾಗ ಮುಳುಗಡೆಯಾಗುತ್ತಿದೆ. ನೀರಿನ ಪ್ರವಾಹ ಅಣೆಕಟ್ಟನ್ನು ಕೊಚ್ಚಿಕೊಂಡು ಹೋಗುತ್ತಿದೆ. ಈಗಾಗಲೇ ಅಟ್ಟೆಯ ಮೇಲ್ಭಾಗದಲ್ಲಿರುವ ಸೇತುವೆಯ ತಡೆಯ ರಾಡ್ ಗಳನ್ನು ಕೊಚ್ಚಿಕೊಂಡು ಹೋಗಿದೆ. ಕೃಷಿ ತೋಟದ ಬಳಿ ಕಟ್ಟಲಾದ ತಡೆಗೋಡೆ ನೀರು ಪಾಲಾಗಿದೆ. ಪ್ರತಿ ಮಳೆಗಾಲದಲ್ಲಿರುವ ಕಿಂಡಿ ಅಣೆಕಟ್ಟು ತುಂಬುತ್ತದೆ. ಇದರಿಂದ ಚೆಂಡೆಗುಳಿ, ಚೆಕ್ಕಿದಕಾಡು ಸಂಪರ್ಕ ಕಡಿತಗೊಳ್ಳುತ್ತದೆ. ಶಾಲಾ ವಿದ್ಯಾರ್ಥಿಗಳು, ನಿತ್ಯ ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ತಡೆ ಹಾನಿಗೊಂಡ ಹಿನ್ನೆಲೆಯಲ್ಲಿ ಈ ಸೇತುವೆ ಮೂಲಕ ಮಕ್ಕಳನ್ನು ಕಳಿಸಲು ಆತಂಕಪಡುವಂತೆ ಮಾಡಿದೆ. ಪಕ್ಕದ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ವಿಟ್ಲ ಪಟ್ಟಣ ಪಂಚಾಯಿತಿ ವತಿಯಿಂದ ಕೃಷಿ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ ಅವರು. ಇದೀಗ ಮುಂಜಾಗ್ರತಾ ಕ್ರಮವಾಗಿ ಚೆಂಡೆಗುಳಿ, ಚೆಕ್ಕಿದಕಾಡು ಗ್ರಾಮಸ್ಥರು ಲಾಕ್ ಡೌನ್ ವೇಳೆ ಅಣೆಕಟ್ಟೆಯಲ್ಲಿ ನೀರು ಹರಿದು ಹೋಗಲು ಮರದ ದಿಮ್ಮಿಗಳನ್ನು ತೆರವುಗೊಳಿಸಿದರು. ಬೆಳಿಗ್ಗೆನಿಂದ ಮಧ್ಯಾಹ್ನದ ವರೆಗೆ ಕಾರ್ಯಾಚರಣೆ ನಡೆಸಿದರು. ಮುಚ್ಚಿದ್ದ ಪ್ರಮುಖ ಗಂಡಿಗಳನ್ನು ತೆರೆಯಲಾಯಿತು. ಇನ್ನಾದರೂ ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.