Friday, April 26, 2024
spot_imgspot_img
spot_imgspot_img

ವಿಟ್ಲ: ಈದುಲ್ ಫಿತರ್ ಹಬ್ಬದ ಪ್ರಯುಕ್ತ ರಶೀದ್ ವಿಟ್ಲ ಅವರ ನೇತೃತ್ವದಲ್ಲಿ ಕಿಟ್ ಹಾಗೂ ಮಧ್ಯಾಹ್ನದ ಆಹಾರ ವಿತರಣೆ

- Advertisement -G L Acharya panikkar
- Advertisement -

ವಿಟ್ಲ: ಈದುಲ್ ಫಿತರ್ ಸಂಭ್ರಮಕ್ಕೆ ಲಾಕ್ ಡೌನ್ ಅಡ್ಡಿಯಿದ್ದರೂ ಹಬ್ಬಕ್ಕೆ ಮಾಡುವ ಘಮ ಘಮ ಬಿರಿಯಾನಿ ಕೊರೋನಾ ವಾರಿಯರ್ಸ್ ಹೊಟ್ಟೆ ತಣಿಸಿತು. ನೀಡಿದವರ ಮನವೂ ತಣಿಯಿತು.

ಕಡು ಬಿಸಿಲ ಬೇಗೆಯನ್ನೂ ಲೆಕ್ಕಿಸದೇ, ನಿದ್ದೆಯನ್ನೂ ಮಾಡದೇ ಜನರ ಸುರಕ್ಷತೆಗಾಗಿ ಹಗಲಿರುಳು ಕೆಲಸ ಮಾಡುತ್ತಿರುವ ಪೊಲೀಸರು, ಹೋಮ್ ಗಾರ್ಡ್ಸ್, ಆರೋಗ್ಯ ಅಧಿಕಾರಿಗಳು, ಸಿಬ್ಬಂದಿಗಳು, ರೋಗಿಗಳು, ಪಂಚಾಯತಿನ ನೌಕರರು, ಕಸ ಗುಡಿಸುವ, ಪೇಟೆಯ ಶುಚಿತ್ವ ಕಾಪಾಡುವ ಪೌರ ಕಾರ್ಮಿಕರು ಸೇರಿದಂತೆ ನೂರಾರು ಜನರಿಗೆ ಜಿಲ್ಲೆಯಾದ್ಯಂತ ಸಮಾಜಮುಖೀ ಕಾರುಣ್ಯದ ಸೇವೆಗೈಯ್ಯುತ್ತಿರುವ ಮಂಗಳೂರು ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಕರೂ ಆದ ರಶೀದ್ ವಿಟ್ಲ ಅವರ ನೇತೃತ್ವದಲ್ಲಿ ಮಧ್ಯಾಹ್ನದ ಬಿರಿಯಾನಿ ವಿತರಿಸಲಾಯಿತು.

ಕೊರೋನಾ ವಾರಿಯರ್ಸ್ಗಳಾದ ವಿಟ್ಲ ಪೊಲೀಸರಿಗೆ ಸಹಾಯ ಮಾಡುತ್ತಿರುವ ಹೋಮ್ ಗಾರ್ಡ್ಸ್ ಹಾಗೂ ಕಸ ವಿಲೇವಾರಿ ಕೆಲಸದಲ್ಲಿ ತೊಡಗಿಸಿಕೊಂಡಿರುವ ಪೌರ ಕಾರ್ಮಿಕರಿಗೆ ಮಾನವೀಯ ನೆಲೆಯಲ್ಲಿ ಕೋವಿಡ್ ರೇಶನ್ ಕಿಟ್ ಗಳನ್ನೂ ಹಸ್ತಾಂತರಿಸುವ ಮೂಲಕ ಅರ್ಥಪೂರ್ಣ ಈದುಲ್ ಫಿತರ್ ಗೆ ಮುನ್ನುಡಿ ಹಾಕಲಾಯಿತು. ಕಳೆದ ವರ್ಷದಂತೆ ಈ ವರ್ಷ ಕೂಡಾ ಪವಿತ್ರ ಹಬ್ಬಕ್ಕೆ ಕೊರೋನಾ ಲಾಕ್ ಡೌನ್ ಅಂಕಿತ ಹಾಕಿದ್ದು, ಈದ್ ನ್ನು ಮುಸಲ್ಮಾನ ಬಾಂಧವರು ಮನೆಯಲ್ಲೇ ಆಚರಿಸುವ ಪ್ರಮೇಯ ಒದಗಿ ಬಂದಿದೆ. ಸಂಭ್ರಮದ ಆಚರಣೆಗೆ ಸಾಮಾಜಿಕ ಅಂತರದ ಅಡ್ಡಿಯಿದೆ.

ವಿಶೇಷ ಪ್ರಾರ್ಥನೆಗೆ ಮಸೀದಿ ಮೆಟ್ಟಿಲು ಹತ್ತುವಂತಿಲ್ಲ, ಆಲಿಂಗನ, ಹಸ್ತ ಲಾಘವ ಮಾಡುವಂತಿಲ್ಲ,
ಈ ಬಾರಿಯೂ ಮನೆಯ ನಾಲ್ಕು ಗೋಡೆಯ ಮಧ್ಯೆ ಕುಟುಂಬಿಕರ ಜೊತೆ ಈದ್ ಪ್ರಾರ್ಥನೆ ನೆರವೇರಿಸಿ ತೃಪ್ತಿ ಪಟ್ಟುಕೊಂಡ ಮುಸಲ್ಮಾನರು ಕೋವಿಡ್ ವೈರಾಣು ಆದಷ್ಟು ಬೇಗ ನಿರ್ಮೂಲನೆಗೊಂಡು ದೇಶ ಸಮೃದ್ಧವಾಗಲಿ ಎಂದು ವಿಶೇಷ ದುವಾ ಪ್ರಾರ್ಥನೆ ನೆರವೇರಿಸಿದರು. ಇದಕ್ಕೂ ಮುನ್ನ ಇಸ್ಲಾಮ್ ಕಲ್ಪಿಸಿದ ಬಡ ಮತ್ತು ಅಶಕ್ತ ಕುಟುಂಬಗಳಿಗೆ ಕಡ್ಡಾಯ ನೀಡಬೇಕಾದ ಫಿತರ್ ದವಸ ಧಾನ್ಯಗಳನ್ನು ಮುಸಲ್ಮಾನರು ವಿತರಿಸಿದರು.

ಇವೆಲ್ಲದರ ಮಧ್ಯೆ ಸಾಮಾಜಿಕ ಕಾರ್ಯಕರ್ತ ರಶೀದ್ ವಿಟ್ಲ ಅವರ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ ನೂರಾರು ಕೊರೋನಾ ವಾರಿಯರ್ಸ್ ಹಾಗೂ ಆಯ್ದ ನೌಕರರಿಗೆ ಬಿರಿಯಾನಿ ಮತ್ತು ಕೋವಿಡ್ ರೇಶನ್ ಕಿಟ್ ವಿತರಿಸಿ ಹಬ್ಬಕ್ಕೆ ವಿಶೇಷ ಕಳೆ ತಂದರು. ವಿಟ್ಲ ಪೊಲೀಸರಿಗೆ ಹಾಗೂ ಹೋಮ್ ಗಾರ್ಡ್ಸ್ ಗೆ, ವಿಟ್ಲ ಪಟ್ಟಣ ಪಂಚಾಯತು ನೌಕರರಿಗೆ ಹಾಗೂ ಪೌರ ಕಾರ್ಮಿಕರಿಗೆ ವಿವಿಧ ಆಸ್ಪತ್ರೆಯ ಅಲ್ಲಿನ ಸಿಬ್ಬಂದಿ ಮತ್ತು ರೋಗಿಗಳಿಗೆ ವಿತರಿಸಲಾಯಿತು. ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಸದಸ್ಯ ರಾಮ್ ದಾಸ್ ಶೆಣೈ, ವಿಟ್ಲ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಜಯರಾಮ್ ರೈ, ರಶೀದ್ ವಿಟ್ಲ ಅವರ ಜೊತೆ ಹನೀಫ್ ಕುದ್ದುಪದವು, ಫಾರೂಕ್ ಜುಬೇಲ್, ಸಫ್ವಾನ್ ವಿಟ್ಲ, ಹಾರೀಸ್ ಕೊಡಂಗಾಯಿ ಭಾಗವಹಿಸಿದ್ದರು.

- Advertisement -

Related news

error: Content is protected !!