Thursday, May 16, 2024
spot_imgspot_img
spot_imgspot_img

ವಿಟ್ಲ: ಕೂಡುರಸ್ತೆ ಗಡಿಪ್ರದೇಶದಲ್ಲಿರುವ ಚುನಾವಣಾ ಚೆಕ್ ಪೋಸ್ಟ್‌ನ ವ್ಯವಸ್ಥೆ ಸರಿಪಡಿಸುವಂತೆ ನಾಗರಿಕರ ಆಗ್ರಹ

- Advertisement -G L Acharya panikkar
- Advertisement -

ವಿಟ್ಲ: ಲೋಕಸಭಾ ಚುನಾವಣೆಗೆ ಈಗಾಗಲೇ ದಿನ ನಿಗದಿಯಾಗಿದ್ದು, ಜಿಲ್ಲಾಡಳಿತ ಸರ್ವ ಸನ್ನದ್ದವಾಗಿದೆ. ಅಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತವು ಗಡಿಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ 23 ಕಡೆಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿದೆ. ಆದರೆ ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಕರ್ನಾಟಕ ಕೇರಳ ಗಡಿಪ್ರದೇಶವಾದ ಕೂಡುರಸ್ತೆಯಲ್ಲಿ ಆರಂಭಿಸಲಾಗಿರುವ ಚೆಕ್ ಪೋಸ್ಟ್ ಮಾತ್ರ ಇವೆಲ್ಲವಕ್ಕೆ ವ್ಯತಿರಿಕ್ತವಾಗಿದ್ದು, ಅಲ್ಲಿನ ಸಿಬಂಧಿಗಳ ಆಲಸ್ಯತನದಿಂದಾಗಿ ಈ ಚೆಕ್ ಪೋಸ್ಟ್ ಮಾತ್ರ ಅಕ್ರಮ ವ್ಯವಹಾರಿಗಳಿಗೆ ರಹದಾರಿಯಾಗಿದೆ ಎನ್ನುವ ಆರೋಪ ನಾಗರಿಕ ವಲಯದಿಂದ ಕೇಳಿಬರುತ್ತಿದೆ.

ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ಕೂಡಲೇ ಜೆಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳ‌ನ್ನು ತೆರೆಯಲಾಗಿತ್ತು. ಅದೇ ರೀತಿ ಸಾಲೆತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಡುರಸ್ತೆಯಲ್ಲಿಯೂ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ. ಅಲ್ಲಿ ಪೊಲೀಸರ ಸಹಿತ ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳನ್ನು ನಿಯೋಜನೆ‌ ಮಾಡಲಾಗಿದ್ದು, ಮೂರು ಪಾಳಿಯಲ್ಲಿ ಅವರು ಕೆಲಸ ನಿರ್ವಹಿಸುತ್ತಿದ್ದಾರೆ. ಈ ಚೆಕ್ ಪೋಸ್ಟ್ ಮೂಲಕ ರಾಜ್ಯದ ಒಳಬರುವ ಹಾಗೂ ಹೊರಹೋಗುವ ವಾಹನಗಳ ಬಗ್ಗೆ ನಿಘಾ ವಹಿಸುವಂತೆ ಚೆಕ್ ಪೋಸ್ಟ್ ಸಿಬ್ಬಂದಿಗಳಿಗೆ ಮೇಲಾಧಿಕಾರಿಗಳು ನಿರ್ದೇಶನ ನೀಡಿದ್ದು, ಈ ನಿಟ್ಟಿನಲ್ಲಿ ಚೆಕ್ ಪೋಸ್ಟ್ ಗಳು ಕಾರ್ಯನಿರ್ವಹಿಸಬೇಕಿದೆ. ಆದರೆ ಕೂಡುರಸ್ತೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚೆಕ್ ಪೋಸ್ಟ್ ನಲ್ಲಿ ಮಾತ್ರ ಅಲ್ಲಿ‌ ಕರ್ತವ್ಯದಲ್ಲಿರುವ ಸಿಬ್ಬಂದಿಗಳು ಆ ದಾರಿಯಾಗಿ ಹಲವಾರು ವಾಹನಗಳು ರಾತ್ರಿ ಹಗಲೆನ್ನದೆ ತೆರಳುತ್ತಿವೆಯಾದರೂ ಬೆರಳೆಣಿಕೆಯ ವಾಹನವನ್ನು ತಪಾಸಣೆ ನೆಪದಲ್ಲಿ ನಿಲ್ಲಿಸಿ ಉಳಿದ ವಾಹನಗಳನ್ನು ಹಾಗೇ ಬಿಡುತ್ತಿದ್ದು, ಈ ಚೆಕ್ ಪೋಸ್ಟ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ ಎನ್ನುವ ಆರೋಪ ನಾಗರೀಕ ವಲಯದಿಂದ ಕೇಳಿಬರುತ್ತಿದೆ.

ಅಕ್ರಮವನ್ನು ತಡೆಗಟ್ಟಿದ್ದ ಚೆಕ್ ಪೋಸ್ಟ್ : ಗಡಿ ಭಾಗದಲ್ಲಿ ನಡೆಯುವ ಅಪರಾಧ ಕೃತ್ಯವನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ರಾಜ್ಯದಲ್ಲಿ ಅಪರಾಧ ಕೃತ್ಯ ನಡೆಸಿ ಅಪರಾಧಿಗಳು ಪರಾರಿಯಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನಿರ್ದೇಶನದಂತೆ ಸಾಲೆತ್ತೂರು ಬಳಿಯ ಕೂಡುರಸ್ತೆಯಲ್ಲಿ ಚಕ್ ಪೋಸ್ಟ್ ಅನ್ನು ಆರಂಭಿಸಲಾಗಿತ್ತು. ಇಲ್ಲಿ ವಿಟ್ಲ ಪೊಲೀಸ್ ಠಾಣಾ ಸಿಬ್ಬಂದಿಗಳು ರಾತ್ರಿ ಹಗಲೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದರು. ಇದರಿಂದಾಗಿ ಈ ಭಾಗದಲ್ಲಿ ನಡೆಯುತ್ತಿದ್ದ ಅಪರಾಧ ಕೃತ್ಯಗಳಿಗೆ ಕಡಿವಾಣ ಬಿದ್ದಿತ್ತು ಮಾತ್ರವಲ್ಲದೆ ಜನರಲ್ಲಿ ಪೊಲೀಸರ ಮೇಲಿನ ಭಯ ಹೆಚ್ಚಾಗಿತ್ತು.

ಘನತೆ ಕಳೆದು ಕೊಳ್ಳುತ್ತಿದೆ ಕೂಡುರಸ್ತೆ ಚೆಕ್ ಪೋಸ್ಟ್ : ಇದೀಗ ಚುನಾವಣೆ ನೀತಿಸಂಹಿತೆ ಜಾರಿಯಾದ ಬಳಿಕ ಕೂಡುರಸ್ತೆ ಚೆಕ್ ಪೋಸ್ಟ್ ನಲ್ಲಿ ಚುನಾವಣೆ ಕರ್ತವ್ಯ ನಿರ್ವಹಿಸುವ ನಿಟ್ಟಿನಲ್ಲಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಭದ್ರತೆ ಹಿತದೃಷ್ಠಿಯಿಂದ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಆದರೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವೊಂದು ಚುನಾವಣಾ ಕರ್ತವ್ಯದ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಮರೆತು ಕೆಲವೊಂದು ಬೆರಳೆಣಿಕೆಯ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಿ ಉಳಿದವುಗಳನ್ನು ಹಾಗೆಯೇ ಬಿಡುತ್ತಿರುವುದರಿಂದ ಜನರಿಗೆ ಚೆಕ್ ಪೋಸ್ಟ್ ಬಗೆಗಿನ ಭಯ ದೂರವಾಗಿದ್ದು, ಅಕ್ರಮ ವ್ಯವಹಾರಕ್ಕೆ ಇದೊಂದು ರಹದಾರಿಯಾದಂತಾಗಿದೆ ಎನ್ನುವುದು ನಾಗರಿಕರ ಆರೋಪವಾಗಿದೆ.

ಮೇಲಾಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಚುನಾವಣೆ ನಿಮಿತ್ತ ಆರಂಭಿಸಲಾದ ಚೆಕ್ ಪೋಸ್ಟ್ ಗಳು ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕಿದೆ. ನೂರಾರು ವಾಹನಗಳು ಸಂಚಾರ ನಡೆಸುವ ರಸ್ತೆಯಲ್ಲಿ ಮೇಲಾಧಿಕಾರಿಗಳ ಕಣ್ಣಿಗೆ ಮಣ್ಣೆರಚುವ ಸಲುವಾಗಿ ಕೆಲವೊಂದು ವಾಹನಗಳನ್ನು ತಪಾಸಣೆ ನೆಪದಲ್ಲಿ ನಿಲ್ಲಿಸುತ್ತಿರುವುದರಿಂದ ಚೆಕ್ ಪೋಸ್ಟ್ ಆರಂಭಿಸಿರುವ ಉದ್ದೇಶ ಈಡೇರಲು ಸಾಧ್ಯವಿಲ್ಲ. ಇಂತಹ ಸಿಬ್ಬಂದಿಗಳು ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಚೆಕ್ ಪೋಸ್ಟ್ ನ ಘನತೆಗೂ ಕುಂದು ಬರುವ ಸಾದಸ್ಯತೆ ಇದೆ. ಮೇಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸುವುದು ಅನಿವಾರ್ಯವಾಗಿದೆ.

- Advertisement -

Related news

error: Content is protected !!