ಸಂತೆ ವ್ಯಾಪಾರ ಸೇರಿದಂತೆ ಯಾವುದೇ ವ್ಯವಹಾರ ವಹಿವಾಟುಗಳಿಲ್ಲದೆ ನಡೆಯುವ ತುಳುನಾಡಿನ ಕಾರಣಿಕದ ಕೇಪು ಜಾತ್ರೆ
ಮಕ್ಕಳನ್ನು ಸಾಂಕೇತಿಕ ರೂಪದಲ್ಲಿ ಉಳ್ಳಾಲ್ತಿ ದೇವಿಗೆ ಹರಕೆ ಒಪ್ಪಿಸುವುದು ಈ ಕ್ಷೇತ್ರದ ಕಜಂಬು ಉತ್ಸವದ ವಿಶೇಷತೆ






ವಿಟ್ಲ: ಕೇರಳ- ಕರ್ನಾಟಕ ಭಾಗಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಪ್ರದೇಶದ ಇತಿಹಾಸ ಪ್ರಸಿದ್ಧ ದೇಗುಲವಿದು. ಭಕ್ತರ ಅಭೀಷ್ಠೆಗಳನ್ನು ಈಡೇರಿಸುವ ಕೇಪು ಶ್ರೀ ಉಳ್ಳಾಲ್ತಿ ಅಮ್ಮನ ಕಜಂಬು ಉತ್ಸವ ಮಕ್ಕಳನ್ನು ದೇವರಿಗೊಪ್ಪಿಸುವ ಹರಕೆಯ ಪಾಲನೆಯ ಮೂಲಕ ಗಮನ ಸೆಳೆಯುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಸೀಮೆಯ ಹತ್ತು ಭಾಗದ ಜನರ ಆರಾಧ್ಯ ದೈವ ಇತಿಹಾಸ ಪ್ರಸಿದ್ಧ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಇಂದು ಕಾಲಾವಧಿ ಕಜಂಬು ಉತ್ಸವ ನಡೆಯಲಿದೆ. ತುಳುನಾಡಿನಲ್ಲಿ ಪಂಚ ಉಳ್ಳಾಲ್ತಿ ಕ್ಷೇತ್ರಗಳಲ್ಲಿ ಕೇಪು ಶ್ರೀ ಉಳ್ಳಾಲ್ತಿ ಕ್ಷೇತ್ರವೂ ಒಂದು ಕಾರಣಿಕರ ಕ್ಷೇತ್ರ. ಕೇಪು, ಬಲ್ನಾಡು, ಮಾಣಿ, ಅನಂತಾಡಿ, ಕಲಿಂಜ ಹೀಗೆ ಐದು ಕ್ಷೇತ್ರಗಳಲ್ಲಿ ಉಳ್ಳಾಲ್ತಿ ದೇವಿ ನೆಲೆಯೂರಿ ಕಾರಣಿಕದ ಕ್ಷೇತ್ರವಾಗಿ ಭಕ್ತಮಾನಸದಲ್ಲಿ ನೆಲೆಯಾಗಿದ್ದಾರೆ.
ಸುಮಾರು 800-900 ವರ್ಷಗಳ ಇತಿಹಾಸ ಹೊಂದಿರುವ ಕೇಪು ಶ್ರೀ ಉಳ್ಳಾಲ್ತಿ ಕ್ಷೇತ್ರ ವಿಟ್ಲ ಅರಸು ಮನೆತನದ ಡೊಂಬ ಹೆಗ್ಗಡೆ ಅರಸರ ಆಳ್ವಿಕೆಗೆ ಒಳಪಟ್ಟು ನಿರ್ಮಾಣಗೊಂಡಿತ್ತು ಎನ್ನಲಾಗಿದೆ. ಈ ಕ್ಷೇತ್ರದಲ್ಲಿ ನಡೆಯುವ ದೇವಿಯ ನೆರಿ ಇಳಿಯುವುದು ಕಾರ್ಯಕ್ರಮವನ್ನು ಹಿಂದಿನ ದಿನ ಕಾಲದಿಂದಲೂ ಮಹಿಳೆಯರು ನೋಡುವಂತಿಲ್ಲ. ಈ ನಿರ್ಬಂಧವನ್ನು ಮೀರಿ ಈರ್ವರು ಅಕ್ಕ ತಂಗಿ ರಾಣಿಯರು ವೀಕ್ಷಿಸಿದ ಪರಿಣಾಮ ಇವರಿಬ್ಬರೂ ಈ ಕ್ಷೇತ್ರದಲ್ಲಿ ಕಲ್ಲಾಗಿ ಹೋದರು ಎಂಬ ಐತಿಹ್ಯವಿದೆ. ಈ ಅಕ್ಕತಂಗಿಯರೇ ಮುಂದಕ್ಕೆ ಈ ಕ್ಷೇತ್ರದಲ್ಲಿ ಉಳ್ಳಾಲ್ತಿಯಾಗಿ ನೆಲೆಯೂರಿ ಕಾರಣಿಕತೆಯಿಂದ ಮೆರೆದರು ಎಂದು ಹೇಳಲಾಗಿದೆ.

ತುಳುನಾಡಿನ ಉಳ್ಳಾಲ್ತಿ ಕ್ಷೇತ್ರದ ಮೊದಲ ಜಾತ್ರೇ ಎಂದೇ ಪ್ರಸಿದ್ಧವಾದ ಕೇಪು ಶ್ರೀ ಉಳ್ಳಾಲ್ತಿ ಕ್ಷೇತ್ರದಲ್ಲಿ ಕಜಂಬು ಉತ್ಸವ ವಿಶೇಷವಾದದ್ದು. ಅಕ್ಕತಂಗಿಯರ ಬೆಳ್ಳಿಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಮಕ್ಕಳನ್ನು ದೇವಿಯ ಪಾದಕ್ಕೆ ಸ್ಪರ್ಶಿಸುವುದೇ ಕಜಂಬು ಉತ್ಸವದ ವಿಶೇಷತೆಯಾಗಿದೆ. ಸಂತಾನ ಪ್ರಾಪ್ತಿಯಾಗದವರು ತೊಟ್ಟಿಲು ಕೊಂಬು ವಾದ್ಯದಲ್ಲಿ ಕಜಂಬು ಹಾಕುತ್ತೇವೆ ಎಂದು ಹರಕೆ ಹೇಳಿಕೊಂಡರೆ ಮಕ್ಕಳಾಗುತ್ತದೆ ಎಂಬುದಕ್ಕೆ ಈಗಲೂ ಅದೆಷ್ಟೋ ನಿದರ್ಶನಗಳಿವೆ. ದೇವಿಯ ವರಪ್ರಸಾದದಿಂದ ಪ್ರಾಪ್ತವಾದ ಮಕ್ಕಳನ್ನು ದೇವಿಗೆ ಅರ್ಪಿಸಿ ಪಡೆಯುವುದು ಈ ಉತ್ಸವದ ವಾಡಿಕೆಯಾಗಿದೆ. ಹರಕೆಯ ಮಕ್ಕಳು ಜಾತ್ರೆಗೆ ಎರಡು ದಿನ ಮುಂಚಿತವಾಗಿ ವೃತಾಚರಣೆಯಿಂದಿರಬೇಕು. ಹಸುಳೆಯಾದರೆ ತಾಯಿ ವೃತಾಚರಣೆ ಪಾಲಿಸಬೇಕು. ಕಜಂಬು ಉತ್ಸವದ ದಿನ ಬೆಳಿಗ್ಗೆ ಫಲಾಹಾರ, ಮಧ್ಯಾಹ್ನ ನೈವೇದ್ಯ ಊಟ, ರಾತ್ರಿ ಉಪವಾಸದಿಂದ ಇರಬೇಕು. ಶುಚಿರ್ಭೂತರಾಗಿ ಕ್ಷೇತ್ರಕ್ಕೆ ಬರಬೇಕು. ದೇವಿಗೆ ನಮಸ್ಕರಿಸಿ, ನಲುಗಳಿಗೆ ನಮಸ್ಕರಿಸಿ ನಿಲ್ಲಬೇಕು. ವಿಶೇಷ ಪೂಜೆಯ ಬಳಿಕ ಮಕ್ಕಳನ್ನು ಹರಕೆಯ ನುಡಿಯಂತೆ ಕೊಂಬು ವಾದ್ಯಗಳೊಂದಿಗೆ ಉಳ್ಳಾಲ್ತಿ ಗರ್ಭಗುಡಿಯ ಮೆಟ್ಟಲಿಗೆ ಸ್ಪರ್ಶಿಸಲಾಗುತ್ತದೆ. ಮಕ್ಕಳು ಚೀರಾಡಿದರೆ ದೇವಿಗೆ ಕೇಳಿಸುತ್ತದೆ ಎಂಬ ಪ್ರತೀತಿ ಇದೆ.

ಕ್ಷೇತ್ರದಲ್ಲಿ ಧ್ವಜಾರೋಹಣದ ಬಳಿಕ ಒಟ್ಟು 5 ದಿನಗಳ ಉತ್ಸವ ನಡೆಯುತ್ತದೆ. ಧ್ವಜಾರೋಹಣದ ಬಳಿಕ ಬೆಳ್ಳಿಯ ಮೂರ್ತಿಗಳನ್ನು ವಿಟ್ಲ ಅರಮನೆಯಿಂದ ತಂದು ಉಳ್ಳಾಲ್ತಿ ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಉಳಿದ ದಿನಗಳಲ್ಲಿ ವಿಟ್ಲ ಅರಮನೆಯಲ್ಲಿ ದಿನದ ಎರಡು ಹೊತ್ತು ಪೂಜೆ ಮಾಡಲಾಗುತ್ತದೆ.

ವಿಟ್ಲ ಅರಮನೆಯಿಂದ ಕೇಪು ಸುಬ್ರಾಯ ದೇವಸ್ಥಾನಕ್ಕೆ ಆಗಮಿಸುವ ವಿಟ್ಲ ಅರಸರನ್ನು ಎರಡೂರು ಗುರಿಕ್ಕಾರರು ಸೇರಿ ಉಳ್ಳಾಲ್ತಿ ಕ್ಷೇತ್ರಕ್ಕೆ ಕರೆತರುತ್ತಾರೆ. ಕ್ಷೇತ್ರದಲ್ಲಿ ಬೊಂಡ ಕಾಣಿಕೆ, ಪ್ರಾರ್ಥನೆ ಸಲ್ಲಿಕೆಯಾದ ಬಳಿಕ ದೇವಿಯ ಪಲ್ಲಕ್ಕಿ ಉತ್ಸವ 5 ಸುತ್ತು ನಡೆದು ನಂತರ ಕಜಂಬು ಉತ್ಸವ ನಡೆಯುತ್ತದೆ. ರಾತ್ರಿ ಸುಮಾರು 11 ಗಂಟೆಗೆ ಉತ್ಸವ ಆರಂಭವಾಗಿ ರಾತ್ರಿ 2-3 ಗಂಟೆಯವರೆಗೆ ಮಕ್ಕಳನ್ನು ಹರಕೆ ಒಪ್ಪಿಸುವ ಕಾರ್ಯ ನಡೆಯುತ್ತದೆ. ಅದಾದ ಬಳಿಕ ಬೆಳಿಗ್ಗೆ ನೆರಿ ಇಳಿಯುವ ಕಾರ್ಯಕ್ರಮ ನಡೆಯುತ್ತದೆ.
ಕೇಪು ಕ್ಷೇತ್ರದಲ್ಲಿ ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ಕಜಂಬು ಜಾತ್ರೆ ನಡೆಯುತ್ತದೆ. ಧ್ವಜಾರೋಹಣದ ಬಳಿಕ ಕ್ಷೇತ್ರದಲ್ಲಿ ಒಟ್ಟು 5 ದಿನಗಳ ಉತ್ಸವ ನಡೆಯುತ್ತದೆ. ಪ್ರಥಮ ದಿನ ಧ್ವಜಾರೋಹಣವಾಗಿ, ಎರಡನೇ ದಿನ ಕಜಂಬು ಉತ್ಸವ ಆಗಿ, ಬಳಿಕದ ಮೂರು ದಿನಗಳಲ್ಲಿ ತಂಬಿಲ ಸೇವೆ ನಡೆಯುತ್ತದೆ. 5ನೇ ದಿನ ಧ್ವಜಾವರೋಹಣ ನಡೆಯುತ್ತದೆ. ಕೊಡಿ ಇಳಿಸಿ (ಧ್ವಜಾವರೋಹಣ)ದ ಮೇಲೆ ಕೋಳಿಗುಂಟ ನಡೆಯುತ್ತದೆ. 3 ದಿನಗಳ ಕಾಲ ಜಿಲ್ಲೆಯಲ್ಲಿಯೇ ಪ್ರಸಿದ್ದಿ ಹೊಂದಿರುವ ಕೇಪು ಕೋಳಿ ಅಂಕ ನಡೆಯುತ್ತದೆ.
3 ದಿನಗಳ ಕೋಳಿ ಅಂಕದ ಬಳಿಕ ನಾಲ್ಕನೇ ದಿನ ಭಂಡಾರದ ಕೊಟ್ಯದಲ್ಲಿ ಮಲರಾಯಿ ಮತ್ತು ಪಿಲಿಚಾಮುಂಡಿ ನೇಮೋತ್ಸವ ನಡೆಯುತ್ತದೆ. ನಾಲ್ಕನೇ ದಿನ ಏಕಾದಶಿ ಅಥವಾ ಸೋಮವಾರ ಬಂದರೆ ಕೋಳಿ ಅಂಕ ನಾಲ್ಕು ದಿನ ನಡೆದು ಐದನೇ ದಿನ ನೇಮೋತ್ಸವ ನಡೆಯುತ್ತದೆ.
ಸಾಮಾನ್ಯವಾಗಿ ಯಾವುದೇ ಉಳ್ಳಾಲ್ತಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರವೇಶವಿರುವುದಿಲ್ಲ ಮತ್ತು ಉಳ್ಳಾಲ್ತಿ ನೇಮವನ್ನು ಮಹಿಳೆಯರು ನೋಡಬಾರದು. ಕೇಪು ಕ್ಷೇತ್ರದಲ್ಲಿ ವಿಟ್ಲ ಅರಸರ ಆಗಮನವಾದ ಬಳಿಕ ಮಹಿಳೆಯರು ಒಳಪ್ರವೇಶಿಸಬಹುದು. ಆದರೆ ಧ್ವಜಸ್ತಂಭದಿಂದ ಮುಂದುವರಿದು ಒಳಗೆ ಪ್ರವೇಶವಿಲ್ಲ.
ರಾಣಿಯರು ಕಲ್ಲಾಗಿ ಹೋಗುವಾಗ ಅವರ ಜೊತೆಗೆ ಬಂದಿದ್ದ ಸೈನಿಕರೂ ಮಾಯವಾಗಿದ್ದರು. ಹೀಗಾಗಿ ದೇವಳದ ನಾಲ್ಕು ಮೂಲೆಯಲ್ಲಿ ಈ ಸೈನಿಕರ ಪ್ರತಿನಿಧಿಗಳಾಗಿ ನಲು (ನಲ್ಪೊಳು) ಎಂದು ಕರೆಯಲ್ಪಡುವ ದೈವಮಾಣಿಗಳು ನೆಲೆಯಾಗಿದ್ದಾರೆ. ಈ ನಲುಗಳು ಜಾತ್ರೆಗೆ ಮುನ್ನ ಆರಮನೆಯಲ್ಲಿ ಇಳಿದು ಬಂದು ಜಾತ್ರೋತ್ಸವ ಸುಸೂತ್ರವಾಗಿ ನೆರವೇರಲು ಅರಸರಿಂದ ಪಟ್ಟಿ ತೆಗೆದುಕೊಂಡು ಗ್ರಾಮದಲ್ಲಿ ಸಂಚರಿಸುತ್ತಾರೆ.
ಈ ಕ್ಷೇತ್ರದ ಮತ್ತೊಂದು ವಿಶೇಷವೆಂದರೆ ಇಲ್ಲಿ ಯಾವುದೇ ಹಣದ ವ್ಯವಹಾರಗಳಿಗೆ ಅವಕಾಶವಿಲ್ಲ. ಸಂತೆ ವ್ಯಾಪಾರ ನಡೆಯುವುದಿಲ್ಲ. ಕೋಳಿ ಅಂಕವೂ ಯಾವುದೇ ಜೂಜು ಇಲ್ಲದೆ 3 ದಿನಗಳ ಕಾಲ ಜಿಲ್ಲೆಯಲ್ಲಿಯೇ ಪ್ರಸಿದ್ದಿ ಹೊಂದಿರುವ ಕೇಪು ಕೋಳಿ ಅಂಕ ನಡೆಯುತ್ತದೆ.