




ವಿಟ್ಲ : ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಮೊದಲಿಗೆ ಕನ್ನಡದ ಧ್ವಜವನ್ನು ಶಾಲೆಯ ಆಡಳಿತಾಧಿಕಾರಿ ರವೀಂದ್ರ ಡಿ ಆರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅನಂತರದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಕನ್ನಡಾಂಬೆಗೆ ಪುಷ್ಪಾರ್ಚನೆಯನ್ನು ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲೆಯ ಆಡಳಿತಾಧಿಕಾರಿ ರವೀಂದ್ರ ಡಿ , “ಕನ್ನಡ ನಾಡು ನುಡಿಯ ತುಡಿತದ ಅಂತಃಕರಣ ನಮ್ಮಲ್ಲಿರಬೇಕು. ಭಾವನೆಗಳಿಗೆ ಪದಗಳನ್ನು ಪೋಣಿಸಿ ಸುಮಧುರ ಕಾವ್ಯ ರಚನೆಯನ್ನು ಮಾಡುವ ಸಹೃದಯವನ್ನು ವಿದ್ಯಾರ್ಥಿಗಳು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು ಎಂದರು. ಒಳ್ಳೆಯ ಚಿಂತನೆ, ಆಲೋಚನೆಗಳಿಂದ ಸದೃಢ ಬದುಕನ್ನು ಕಟ್ಟಿಕೊಳ್ಳಬಹುದು “ಎಂದು ಆಶಿಸಿದರು.

ಶಾಲೆಯ ಕನ್ನಡ ಶಿಕ್ಷಕಿ ಯಜ್ಞೇಶ್ವರಿ ಎನ್ ಶೆಟ್ಟಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಮಾತನಾಡಿ ಕನ್ನಡದ ಉಗಮ ಹಾಗೂ ಬೆಳವಣಿಗೆಯ ಸವಿಸ್ತಾರವಾದ ಮಾಹಿತಿ ನೀಡಿದರು. ಶಾಲೆಯ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ.ಶೆಟ್ಟಿ ಕನ್ನಡ ರಾಜ್ಯೋತ್ಸವಕ್ಕೆ ಶುಭಹಾರೈಸಿ, ಭಾರತ ಮಾತೆಯ ತನುಜಾತೆ ಕನ್ನಡ ಮಾತೆಯು ದೇಶದಲ್ಲೆ ಶ್ರೇಷ್ಠ ಸ್ಥಾನವನ್ನು ಅಲಂಕರಿಸಿರುವುದು ಹೆಮ್ಮೆಯ ವಿಚಾರ ಎಂದರು. ವೇದಿಕೆಯಲ್ಲಿ ಶಾಲೆಯ ವಿಜ್ಞಾನ ಶಿಕ್ಷಕಿ, ಸಾಹಿತಿಯೂ ಆಗಿರುವ ಸುಧಾ ಎನ್ ರಾವ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯು ನಿರ್ದೇಶಿಸಿದ ಕನ್ನಡದ ಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದರು. ಕಾರ್ಯಕ್ರಮದ ಕೊನೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿನಿ ಸ್ವಸ್ತಿಯ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿಗಳಿಂದ ಕವಿಗೋಷ್ಠಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಸ್ವಸ್ತಿ, ಸಾಕ್ಷಿ, ವೈಷ್ಣವಿ ಹಾಗೂ ತೃಷ ನಿರೂಪಿಸಿದರು. ವಿದ್ಯಾರ್ಥಿನಿ ಪೂರ್ವಿ ಎ ಭಾರದ್ವಾಜ್ ಸ್ವಾಗತಿಸಿ ಪ್ರಣವ್ಯ ವಂದಿಸಿದರು.