ವಿಟ್ಲ: ಕರ್ಫ್ಯೂ ಹಾಗೂ ಲಾಕ್ ಡೌನ್ ಯಶಸ್ವಿಯಾಗಿ ಅನುಷ್ಠಾನಗೊಂಡಿತ್ತು. ಲಾಕ್‌ಡೌನ್ ಸಡಿಲವಾದ ಬಳಿಕ ಕೊರೊನಾ ಸಂಖ್ಯೆ ಹೆಚ್ಚಾಗಿದೆ. ರಾಜ್ಯದ ಜನರ ಆರ್ಥಿಕ ಹೊರೆಯನ್ನು ತಪ್ಪಿಸಲು ಅನ್‌ಲಾಕ್ ಜಾರಿಗೊಳಿಸಲಾಗಿದೆ. ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಅವುಗಳನ್ನು ಪಾಲಿಸಿದಾಗ ಕೊರೊನಾ ನಿಯಂತ್ರಿಸಲು ಸಾಧ್ಯವಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದರು.
ಅವರು ಮಂಗಳವಾರ ವಿಟ್ಲ ಅತಿಥಿ ಗೃಹದಲ್ಲಿ ವಿಟ್ಲ ಪ್ರದೇಶದಲ್ಲಿ ಕೊರೊನಾ ಮುನ್ನೆಚ್ಚರಿಕೆಯ ನಿಟ್ಟಿನಲ್ಲಿ ಸರ್ಕಾರಿ ಹಾಗೂ ಖಾಸಗಿ ವೈದ್ಯರ ಸಭೆ ನಡೆಸಿ ಮಾತನಾಡಿದರು.
ಮಾಸ್ಕ್ ಇಲ್ಲದೇ ಪೇಟೆಯಲ್ಲಿ ಸುತ್ತಾಡುವವರಿಗೆ ಹಾಗೂ ಅಂಗಡಿ ಮಾಲಕರು ಸಾಮಾಜಿಕ ಅಂತರಕ್ಕೆ ಮಹತ್ವ ನೀಡದೇ ಹೋದಲ್ಲಿ ದಂಡ ವಿಧಿಸುವ ಕಾರ್ಯವಾಗಬೇಕು. ಕಾಯಿಲೆಗಳು ಹಳ್ಳಿಯಿಂದ ನಗರಕ್ಕೆ ಎಂಬ ಮಾತಿತ್ತು ಆದರೆ ಶ್ರೀಮಂತರು, ಬುದ್ಧಿವಂತರು ನಗರದಿಂದ ಹಳ್ಳಿಗಳಿಗೆ ಕೊರೊನಾ ಹಬ್ಬಿಸುವ ಕಾರ್ಯ ಆಗುತ್ತಿದೆ ಎಂದರೆ ತಪ್ಪಾಗಲಾರದು ಎಂದರು.
ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್ ಆರ್ ಮಾತನಾಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಡಿಮೆ ಆದರೆ, ಪ್ರತ್ಯೇಕವಾದ ವ್ಯವಸ್ಥೆಗೆ ಈಗಾಗಲೇ ಸ್ಥಳಗಳನ್ನು ಗುರುತಿಸಿಕೊಳ್ಳಲಾಗಿದೆ. ವಿಟ್ಲ ಭಾಗದಲ್ಲಿ ಹಾಸ್ಟೆಲ್‌ಗಳನ್ನು ಗೊತ್ತು ಪಡಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಆರೋಗ್ಯ ಅಧಿಕಾರಿ ದೀಪಾ ಪ್ರಭು ಮಾತನಾಡಿ ೬೦ವರ್ಷದಿಂದ ಮೇಲ್ಪಟ್ಟವರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ೧೧೦೦ಜನಕ್ಕೆ ರ್‍ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಲಾಗಿದೆ. ಪುತ್ತೂರು ವಿಧಾನಸಭಾಕ್ಷೇತ್ರದ ವಿಟ್ಲ ಹೋಬಳಿ ಭಾಗದಲ್ಲಿ ೫೮ ಪ್ರಕರಣ ಬೆಳಕಿಗೆ ಬಂದಿದ್ದು, ಸಕ್ರೀಯವಾಗಿ ೩೨ ಪ್ರಕರಣಗಳಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೇ ೩ ನಿಧನವಾಗಿದೆ. ೨೬ಮಂದಿಗೆ ಹೋಮ್ ಐಸೋಲೇಶನ್ ಮಾಡಲಾಗಿದೆ. ಇತರ ಕಾಯಿಲೆಯಿಂದ ಬಳಲುತ್ತಿದ್ದವರು ನಿಧನ ಹೊಂದಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ಹರಿಪ್ರಸಾದ್ ಯಾದವ್, ಕಂದಾಯ ನಿರೀಕ್ಷಕ ದೀವಾಕರ ಮುಗುಳ್ಯ, ಗ್ರಾಮ ಕರಣಿಕರ ಪ್ರಕಾಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಅರುಣ್ ವಿಟ್ಲ, ರಾಮದಾಸ ಶೆಣೈ, ಲೋಕನಾಥ ಶೆಟ್ಟಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ ಉಪಸ್ಥಿತರಿದ್ದರು.