Wednesday, May 15, 2024
spot_imgspot_img
spot_imgspot_img

ಅಫ್ಘಾನ್ ಉಗ್ರರ ತಾಣವಾಗದಂತೆ ತಡೆಯಲು ಬ್ರಿಕ್ಸ್​ ಪಣ; ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಪರೋಕ್ಷ ಎಚ್ಚರಿಕೆ

- Advertisement -G L Acharya panikkar
- Advertisement -

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಬ್ರಿಕ್ಸ್​​ ಶೃಂಗ ಸಭೆಯಲ್ಲಿ ಅಫ್ಘಾನಿಸ್ತಾನದ ಬೆಳವಣಿಗೆ ಬಗ್ಗೆ ಸದಸ್ಯ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿವೆ. ಬ್ರಿಕ್ಸ್​ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಅಫ್ಘಾನಿಸ್ತಾನದ ಸದ್ಯದ ಬೆಳವಣಿಗೆ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಅಫ್ಘಾನ್ ಬೆಳವಣಿಗೆಯಿಂದ ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಗೆ ಧಕ್ಕೆಯಾಗುವ ಆತಂಕ ವ್ಯಕ್ತಪಡಿಸಿರುವ ಬ್ರಿಕ್ಸ್​​ ರಾಷ್ಟ್ರಗಳು, ಅಫ್ಘಾನ್ ಉಗ್ರರ ತಾಣವಾಗದಂತೆ ತಡೆಯಲು ಒಂದಾಗುವಂತೆ ಕರೆ ನೀಡಿವೆ. ಇನ್ನು ಸಭೆಯಲ್ಲಿ ಅಮೆರಿಕ ಮತ್ತು ಪಾಕ್ ವಿಚಾರವೂ ಪ್ರಸ್ತಾಪವಾಗಿದ್ದು ಗಮನಾರ್ಹ.

ಬ್ರಿಕ್ಸ್​ ಸಭೆಯಲ್ಲಿ ಅಫ್ಘಾನಿಸ್ತಾನ ಬೆಳವಣಿಗೆ ಬಗ್ಗೆ ಗಂಭೀರ ಚರ್ಚೆ
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾಗಿರುವುದನ್ನ ಜಾಗತಿಕ ಭದ್ರತೆಗೆ ಧಕ್ಕೆ ಅಂತಾನೆ ವಿಶ್ಲೇಷಿಸಲಾಗ್ತಿದೆ. ಅದೇ ರೀತಿಯಾಗಿ ತಾಲಿಬಾನ್ ನಡೆದುಕೊಳ್ತಿದೆ. ಮಾನವ ಹಕ್ಕು ಉಲ್ಲಂಘನೆ, ಮಹಿಳೆಯರು, ಮಕ್ಕಳು, ಅಲ್ಪಸಂಖ್ಯಾತರ ಮೇಲೆ ರಾಕ್ಷಸರಂತೆ ತಾಲಿಬಾನಿಗಳು ದಾಳಿ ಮಾಡ್ತಿದ್ದಾರೆ. ಅಫ್ಘಾನ್ ಜನ ಅಕ್ಷರಶಃ ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಅಲ್ಲಿನ ಉಗ್ರ ಕಾನೂನುಗಳು ಬೆಚ್ಚಿ ಬೀಳಿಸುವಂತಿವೆ. ಅಲ್ಲದೆ ತಾಲಿಬಾನಿಗಳ ಉಗ್ರ ರೂಪ ಜಾಗತಿಕ ಆತಂಕಕ್ಕೂ ಕಾರಣವಾಗಿದೆ.

ಅಫ್ಘಾನ್ ಉಗ್ರರ ತಾಣವಾಗದಂತೆ ತಡೆಯಲು ಬ್ರಿಕ್ಸ್​ ನಿರ್ಧಾರ
ಅಫ್ಘಾನಿಸ್ತಾನದ ಸದ್ಯದ ಬೆಳವಣಿಗೆಗಳ ಬಗ್ಗೆ ನಿನ್ನೆ ನಡೆದ ಐದು ರಾಷ್ಟ್ರಗಳ 12ನೇ ಬ್ರಿಕ್ಸ್​ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ, ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ದಕ್ಷಿಣ ಆಫ್ರಿಕ ಅಧ್ಯಕ್ಷ ಸಿರಿಲ್ ರಾಮಫೋಸಾ, ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ವರ್ಚುವಲ್ ಆಗಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲಾ ಐದು ರಾಷ್ಟ್ರಗಳ ನಾಯಕರೂ ಕೂಡ ಅಫ್ಘಾನ್​​​​​ನ ಸದ್ಯದ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅಫ್ಘಾನ್ ಉಗ್ರರ ತಾಣವಾಗದಂತೆ ತಡೆಯಲು ಬ್ರಿಕ್ಸ್​ ನಿರ್ಧಾರವನ್ನೂ ಕೈಗೊಂಡಿದೆ.

ಬ್ರಿಕ್ಸ್​ ಸಭೆಯ ಹೈಲೆಟ್ಸ್​​​!
ಸದ್ಯ ಅಫ್ಘಾನಿಸ್ತಾನದಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಬ್ರಿಕ್ಸ್​​​ ರಾಷ್ಟ್ರಗಳು ಕಳವಳ ವ್ಯಕ್ತಪಡಿಸಿದ್ದು, ಕಾಬೂಲ್ ವಿಮಾನ ನಿಲ್ದಾಣದ ಮೇಲಿನ ದಾಳಿಗೆ ಖಂಡಿಸಿವೆ. ಅಲ್ಲದೆ ಅಫ್ಘಾನ್​​​​ ಮತ್ತೊಮ್ಮೆ ಭಯೋತ್ಪಾದಕರ ಸ್ವರ್ಗ ಆಗಬಾರದು. ಅಫ್ಘಾನ್ ಉಗ್ರರ ತಾಣವಾಗಲು ಅವಕಾಶ ಕೊಡಬಾರದು ಮತ್ತು ಅಫ್ಘಾನಿಸ್ತಾನ ಅಕ್ಕಪಕ್ಕದ ದೇಶಗಳಿಗೆ ಆತಂಕ ತರದಂತೆ ಬ್ರಿಕ್ಸ್​ ನೋಡಿಕೊಳ್ಳಬೇಕು ಅಂತ ಸಭೆಯಲ್ಲಿ ತೀರ್ಮಾನಿಸಲಾಯಿತು. ಜೊತೆಗೆ ಅಫ್ಘಾನ್​​​ನಲ್ಲಿ ಮಾನವ ಹಕ್ಕು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ರಕ್ಷಣೆಗೆ ಮುಂದಾಗಲು ಬ್ರಿಕ್ಸ್​ ಸದಸ್ಯ ರಾಷ್ಟ್ರಗಳ ನಾಯಕರು ತೀರ್ಮಾನಿಸಿದ್ದಾರೆ.

ಇನ್ನು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯನ್ನು ಸಂಘಟಿತವಾಗಿ ಹಿಮ್ಮೆಟ್ಟಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ವಿಶ್ವ ವ್ಯಾಪಾರ ಸಂಸ್ಥೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಂತಾದವುಗಳನ್ನು ಸುಧಾರಣೆಗೊಳಿಸುವ ಅಗತ್ಯವಿದೆ ಎಂದಿದ್ದಾರೆ. ಅಲ್ಲದೆ ಅಫ್ಘಾನ್​​ ವಿಚಾರದಲ್ಲಿ ಪಾಕ್​​ಗೂ ಎಚ್ಚರಿಕೆ ನೀಡಿದ್ದಾರೆ.

ಪಾಕ್​​ಗೆ ಮೋದಿ ಎಚ್ಚರಿಕೆ
ಭಯೋತ್ಪಾದನೆ ವಿಶ್ವ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿದೆ. ಅಲ್ಲದೆ ಭಯೋತ್ಪಾದನೆ ಪ್ರತಿಪಾದಿಸುವ ಸಹಾಯ & ಪ್ರೋತ್ಸಾಹ ನೀಡುವ ರಾಷ್ಟ್ರಗಳು ತಮ್ಮ ತಪ್ಪನ್ನು ಅರಿತು, ಪರಾಮರ್ಶೆ ಮಾಡಿಕೊಳ್ಳಬೇಕು ಅಂತ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಭಯೋತ್ಪಾದನೆಯನ್ನು ಸಂಘಟಿತವಾಗಿ ಹಿಮ್ಮೆಟ್ಟಿಸುವ ಅವಶ್ಯಕತೆ ಅಂತ ಮೋದಿ ಹೇಳಿದ್ದಾರೆ.

ಇನ್ನು ಸಭೆಯಲ್ಲಿ ನಾವು ಅಫ್ಘಾನ್ ಬೆಳವಣಿಗೆಗಳನ್ನು ಗಮನಿಸುತ್ತಿದ್ದೇವೆ ಎಂದಿರುವ ಚೀನಾ ಅಫ್ಘಾನ್ ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದೆ. ಇನ್ನು ಇತ್ತ ರಷ್ಯಾ ಅಫ್ಘಾನ್​​​ನ ಪರಿಸ್ಥಿತಿಗೆ ಅಮೆರಿಕವೇ ಕಾರಣ ಎಂದಿದೆ.

ಅಮೆರಿಕ ವಿರುದ್ಧ ರಷ್ಯಾ ಆರೋಪ
ಅಫ್ಘಾನಿಸ್ತಾನದ ಸದ್ಯದ ಬೆಳವಣಿಗೆಗಳಿಗೆ ಅಮೆರಿಕವೇ ಕಾರಣ ಅಂತ ರಷ್ಯಾ ಆರೋಪಿಸಿದೆ. ಅಮೆರಿಕವು ಸೇನೆ ಹಿಂದಕ್ಕೆ ಕರೆಸಿಕೊಂಡಿದ್ದರಿಂದಲೇ ಅಫ್ಘಾನ್​​​​ನಲ್ಲಿ ಹೀಗಾಗಿದೆ ಅಂತ ಅಮೆರಿಕ ವಿರುದ್ಧ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಅಫ್ಘಾನ್​​​ನ ಆಂತರಿಕ ವಿಚಾರದಲ್ಲಿ ಇತರ ದೇಶದ ಹಸ್ತಕ್ಷೇಪ ತಪ್ಪು ಎಂದಿರುವ ಪುಟಿನ್, ಅಫ್ಘಾನ್ ಬೆಳವಣಿಗೆಯಿಂದ ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಗೆ ಧಕ್ಕೆಯಾಗುತ್ತದೆ ಎಂದಿದ್ದಾರೆ.

ಒಟ್ಟಾರೆ ಅಫ್ಘಾನ್​​​ನಲ್ಲಿ ತಾಲಿಬಾನ್ ಸರ್ಕಾರ ಆಡಳಿತ ಮತ್ತು ಅಲ್ಲಿನ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಭಯೋತ್ಫಾಧನೆಯ ವಿರುದ್ಧ ಒಗ್ಗಟ್ಟಿನ ಮಂತ್ರ ಜಪಿಸಿವೆ. ಅಲ್ಲದೆ ಅಫ್ಘಾನ್ ಉಗ್ರರ ತಾಣವಾಗದಂತೆ ತಡೆಯಲು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಮೂಲಕ ಉಗ್ರವಾದಕ್ಕೆ ಖಡಕ್ ಸಂದೇಶ ರವಾನಿಸಿವೆ.

- Advertisement -

Related news

error: Content is protected !!