Thursday, June 25, 2026
spot_imgspot_img
spot_imgspot_img

ಜೀವಜಾಲ, ಮನುಜ ಮತ್ತು ಮಹಿಳೆ

- Advertisement -
- Advertisement -

✍️ ಸರ್ವಮಂಗಳ. ಕೆ.ವಿಟ್ಲ

“ಜೀವನದ ಪರಿಪೂರ್ಣ ದರ್ಶನವ ಹೊಂದಿಹುದು
ಭೂಮಿ ಆಕಾಶದ ವಿಸ್ತರದ ಮಿತಿಯ ಮೀರ್ದು ದದು
ದೇವ, ನರ, ಪಶು, ಸಸಿಗಳೆಲ್ಲ ಕುಣಿಯುವರಲ್ಲಿ
ಭಾವಿಸಾ ಚಿತ್ರವನು.. ಮಂಕುತಿಮ್ಮ ll

ಸೃಷ್ಟಿಯ ಅದ್ಭುತ ರಚನೆಗಳಲ್ಲಿ, ಅಳತೆ ಮೀರಿದ ಅನಂತತೆಯಲ್ಲಿ, ಆಗಸ, ಭೂಮಿ, ಸಾಗರಗಳ ಅಗಾಧತೆಯ ಮುಂದೆ ಎಲ್ಲವೂ ತೃಣ, ಕುಬ್ಜವೇ ಆಗಿದೆ. ಮಾನವ ಜೀವನದ ಸಾರ್ಥಕತೆ, ಪರಿಪೂರ್ಣತೆ ಕೇವಲ ಪ್ರಕೃತಿಯ ಒಡನಾಟದಿಂದ ಮತ್ತು ಪ್ರಕೃತಿ ಸಂರಕ್ಷಣೆಯಿಂದ ಮಾತ್ರ ಸಾಧ್ಯ. ಈ ವಿಶ್ವಕ್ಕೆ ನಾಶವೆಂಬುದಿಲ್ಲ. ಮಾನವ ಈ ಜೀವಜಾಲದ ಒಂದು ಎಳೆ ಮಾತ್ರ..

” ನೆಲ ಜಲ ಕಾಡಿನ ಸಂಬಂಧ, ಬಿಟ್ಟರೂ ಬಿಡಲಾಗದ ಬಂಧ.
ನೀರಿದ್ದರೆ ಮಣ್ಣಿನ ಗಂಧ., ಹಸುರಿನ ಹೊದಿಕೆಯ ಆ ಚೆಂದ.

ಹೌದು! ಪರಿಸರ ಮತ್ತು ಮಾನವ ಸಂಬಂಧ ಅವಿನಾಭಾವ, ಅದು ಕೊನೆಯಿಲ್ಲದ್ದು. ಭೌತ ಪರಿಸರಕ್ಕೂ, ಮಾನವ ಸಮುದಾಯಕ್ಕೂ ಇರಬೇಕಾದ ಸಂಬಂಧದ ಸ್ಪಷ್ಟವಾದ ಅರಿವನ್ನು ” ಪರಿಸರಪ್ರಜ್ಞೆ ” ಎನ್ನುತ್ತಾರೆ. ನಿಸರ್ಗ ನಿಯಮ ಸರಳ ಬದುಕಿಗೆ ಬೇಡವಾದ ವಸ್ತುಗಳನ್ನು ಗಾಜಿನ ಸೀಸೆಯಲ್ಲಿ ಬ್ರಹ್ಮರಾಕ್ಷಸನನ್ನು ಬಿರಡೆ ಹಾಕಿ ಕೂಡಿಹಾಕಿದಂತೆ. ತೈಲವಿರಲಿ, ವಜ್ರವಿರಲಿ ಪಾತಾಳದಲ್ಲಿ ಇರಿಸಿತ್ತು, ಅದನ್ನು ಎತ್ತಿಕೊಂಡ ಮಾನವ ಧೀರನೇ ಸೈ!!
ಪ್ರಕೃತಿಯಲ್ಲಿ ಭಗವತ್ ಸ್ವರೂಪ ಕಂಡ ಸನಾತನ ಸಂಸ್ಕೃತಿ ನಮ್ಮದು. ಪ್ರಾತಃಕಾಲದಿ ಭೂಮಿ ತಾಯಿಗೆ ನಮಿಸಿದವರು, ಮನೆ ಮುಂದೆ ತುಳಸಿಯ ನೆಟ್ಟು ಆರಾಧಿಸಿದವರು, ಮರ ಗಿಡಗಳಲ್ಲಿ ತ್ರಿಮೂರ್ತಿ ರೂಪವನ್ನು ಕಂಡವರು ನಮ್ಮ ಹಿರಿಯರು. ಬ್ರಹ್ಮ ವಿಷ್ಣು ಮಹೇಶ್ವರರಿಗೆ ವಾಹನಗಳ ರೂಪದಲ್ಲಿ ಪಶು ಪಕ್ಷಿಗಳನ್ನು ಕೊಟ್ಟು ಪರಿಸರ ಪ್ರೇಮವನ್ನು ಬೆಳಗಿಸಿದವರು ನಮ್ಮ ಪೂರ್ವಜರು.ಆಧುನೀಕರಣವೆಂಬ ಬೇತಾಳ ತನ್ನ ಕಬಂಧ ಬಾಹುಗಳಿಂದ ಪ್ರಪಂಚವನ್ನೆಲ್ಲ ಗಟ್ಟಿಯಾಗಿ ತಬ್ಬಿಕೊಳ್ಳುತ್ತಿರುವ ಈ ಕಾಲದಲ್ಲಿ ಪರಿಸರ ಸಂರಕ್ಷಣೆಯು ನಮ್ಮ ಮುಂದಿರುವ ದೊಡ್ಡ ಸವಾಲು.

.
” ದಿನ ದಿನವು ಹಳಸುವವು ದಿನ ದಿನವೂ ಕೊಳೆಯುವವು
ಮನುಜ ಕುಲವೆಲ್ಲ ಕೃತಿ ವಿಜಯ ವಿಭವಗಳು
ಅನುದಿನವು ಮತ್ತವನು ತೊಳೆದು ಹೊಸ ತೆನಿಸುವುದೇ
ಜನುಮ ಸಫಲತೆ ನಿನಗೆ ಮಂಕುತಿಮ್ಮll

ಮನುಷ್ಯನ ಸಾಧನೆ ವೈಭವ ವಿಜಯಗಳೆಲ್ಲವೂ ಪ್ರತಿನಿತ್ಯ ಹಳೆಯದಾದರೂ ಕೊಳೆಯಾದ ಪಾತ್ರೆಯನ್ನು ಬೆಳಗಿಸಿದಂತೆ ಹೊಸತನ್ನಾಗಿಸುವುದೇ ನಮ್ಮ ಜನ್ಮದ ಸಾರ್ಥಕತೆ. ಭೂಮಿಯಲ್ಲಿ ಎಲ್ಲರಿಗೂ ಕ್ರಿಯಾತ್ಮಕ ರಚನಾತ್ಮಕ ಜೀವಪರ ಪಾತ್ರವಿದೆ. ಅದನ್ನು ಕಡೆಗಣಿಸಿ ಬಾಳಲಾರೆವು ನಾವು! ಆದರೆ ಮಾನವನ ಹೊರತಾಗಿಯೂ ಪ್ರಕೃತಿ ತನ್ನದೇ ರೀತಿಯಲ್ಲಿ ಮುಂದುವರೆಯಬಲ್ಲದು ವ್ಯಕ್ತಿ ಒಬ್ಬ ಅಸಾಮಾನ್ಯನಾಗಲು ಪ್ರಕೃತಿ ಬದಲಾವಣೆಗೆ ಹೊರಟರೆ ಅದು ಅಮಾನುಷವಾಗಬಲ್ಲದು ಅಷ್ಟೇ. ಇಂತಹ ವಿಷಮ ಪರಿಸ್ಥಿತಿಯಲ್ಲಿರುವ ಈ ಜಗತ್ತಿಗೆ ನಾವು ಈ ಸಮಸ್ಯೆಗಳ ನಿರ್ಮೂಲನಕ್ಕಾಗಿ ಪಣ ತೊಡಬೇಕಾಗಿದೆ.
ಆದಿ ಕಾಲದಿಂದಲೂ ಪ್ರಕೃತಿಯನ್ನು ಮಾತೆಗೆ , ಸ್ತ್ರೀಗೆ ಹೋಲಿಸುತ್ತಾರೆ.

ಒಬ್ಬ ಮಹಿಳೆಯಾಗಿ ನಾವು ಹಲವಾರು ವಿಧಗಳಿಂದ ನಮ್ಮ ಪರಿಸರವನ್ನು ನಮಗೆ ಬೇಕೆನಿಸುವ ಹಾಯ್ ಅನಿಸುವ ಪರಿಸರವಾಗಿ ರೂಪಿಸಿಕೊಳ್ಳಬಹುದು. ಮಕ್ಕಳ ಜೊತೆ ಕೂಡಿಕೊಂಡು ಒಂದು ಪುಟ್ಟ ಕೈತೋಟ ನಿರ್ಮಿಸಬಹುದು. ಆ ತಂಪು! ಕಂಪು ಹಸಿರು ಹಸಿರಾಗಿ ಕಣ್ಮನಗಳಿಗೆ ಮುದ ನೀಡುವಾಗ ಫಲ ಕೊಡುವಾಗ ಎಂತಹ ಸಂಭ್ರಮ! ಮಕ್ಕಳೇ ತಯಾರು ಮಾಡಿದಾಗ ಹೂ ಆಯಿತೆ, ಹಣ್ಣು ಆಯಿತೇ ಎಂದು ಆಗಾಗ ಗಿಡಗಳ ಬಳಿ ಸುಳಿಯುತ್ತಾರೆ.. ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಸಣ್ಣ ಸಣ್ಣ ಕೆಲಸ ಮಕ್ಕಳು ಮಾಡಿದಾಗ ಅವರಿಗೆ ಶ್ರಮದ ಅರಿವು ಆಗುತ್ತದೆ. ಮಹಿಳಾ ಮಣಿಗಳು ಸೇರಿಕೊಂಡು ಪರಿಸರ ಸಂಬಂಧಿತ ಚಟುವಟಿಕೆಗಳನ್ನು ಸುತ್ತಮುತ್ತಲಿನಲ್ಲಿ ಆಚರಿಸಬಹುದು. ಪರಿಸರ ಸ್ವಚ್ಛತೆಯನ್ನು ಕೂಡ ಮಾಡಬಹುದು. ಸೈಕಲಿಂಗ್ ಸ್ಪರ್ಧೆ ಮಾಡುವ ಬದಲು ರಿಸೈಕಲ್ ಪ್ರಕ್ರಿಯೆ ನಡೆಸಬಹುದು. ಜನುಮದಿನಕ್ಕೆ ಮಕ್ಕಳ ಕೈಯಲ್ಲಿ ಗಿಡ ನೆಡಿಸಬಹುದು. ಸಾಕು ಪ್ರಾಣಿಗಳನ್ನು ಸಾಕುವುದರಿಂದ ಮಕ್ಕಳಿಗೆ ಅವುಗಳ ಪ್ರೀತಿ ಇಷ್ಟವಾಗಬಹುದು. ನಮ್ಮ ಮಕ್ಕಳನ್ನು ದಾಸರನ್ನಾಗಿ ಮಾಡುವ ತಂತ್ರಜ್ಞಾನಗಳು ನಮಗೆ ಬೇಡ. ವೈಜ್ಞಾನಿಕ ಪ್ರಗತಿಯ ಇನ್ನೊಂದು ಕರಾಳ ಮುಖ ಪರಿಸರ ಮಾಲಿನ್ಯವೇ? ಬಿಸಿ ಕಾಫಿ ಹೀರುವ ತವಕದಲ್ಲಿ ನಾಲಿಗೆ ಸುಡಬಾರದಲ್ಲವೇ… ಸಾಧ್ಯವಾದಷ್ಟು ಪರಿಸರ ಸಂರಕ್ಷಣೆಯುತ್ತ ನಮ್ಮ ನಡೆ ಇರಲಿ.

ಮಕ್ಕಳಿಗೆ ನೀರಿನ ಆಹಾರದ ಸಮರ್ಥ ಬಳಕೆಯ ಕುರಿತು ಜ್ಞಾನ ನೀಡೋಣ. ಸೌರ ಶಕ್ತಿ, ಜೈವಿಕ ಶಕ್ತಿ ಹೆಚ್ಚೆಚ್ಚು ಬಳಸೋಣ. ಪರಿಸರ ಸಂಘ ವಿಜ್ಞಾನ ಸಂಘಗಳ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸೋಣ. ಹುಟ್ಟುಹಬ್ಬಕ್ಕೆ ಮಕ್ಕಳಿಗೆ ಗಿಡಗಳನ್ನೇ ಉಡುಗೊರೆಯಾಗಿ ಕೊಡೋಣ. ಶಾಲೆಗಳಲ್ಲಿ ಪರಿಸರ ಸಂಬಂಧಿತ ಪ್ರಾಜೆಕ್ಟ್ ಮಾಡಲು ಮಕ್ಕಳಿಗೆ ಹೇಳಬಹುದು. ಮಕ್ಕಳಿಗೆ ಅಡುಗೆ ಕೋಣೆಯಲ್ಲಿರುವ ಎಲ್ಲಾ ಪದಾರ್ಥಗಳ ಪರಿಚಯ ಮಾಡುವ ಕೆಲಸ ಅಮ್ಮಂದಿರದು..

ಜಾಗೃತ, ವಿವೇಕಿ ಹೊಸ ಪೀಳಿಗೆಯ ತುರ್ತಿನಲ್ಲಿರುವ ನಾವುಗಳು ವರ್ಷಕ್ಕೆ ಒಮ್ಮೆ ಪರಿಸರ ದಿನ ಆಚರಿಸಿದರೆ ಸಾಕೇ? ಪ್ರತಿದಿನ ಪರಿಸರ ದಿನವಾಗಬೇಕು ಅಲ್ಲವೇ? ಆಗಲೇ ವಸುಂಧರೆ ಸಕಲ ಜೀವಿಗಳಿಗೆ ಆಗುವಳು ಆಸರೆ..!

✍️ ಸರ್ವಮಂಗಳ. ಕೆ.ವಿಟ್ಲ
ಶಿಕ್ಷಕಿ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ.ವಿಟ್ಲ

- Advertisement -

Related news

error: Content is protected !!