


ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಸೂರತ್ ಮೂಲದ ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಭಗವಾನ್‌ರಾವ್ ದೀಪ್ಕೆ ಅವರ ಆದಾಯದ ಮೂಲ ಹಾಗೂ ಆಸ್ತಿ-ಪಾಸ್ತಿಗಳ ಕುರಿತು ಶೀಘ್ರ ತನಿಖೆ ನಡೆಯಬೇಕು. ತನಿಖೆಯಲ್ಲಿ ಅವರು ಅಕ್ರಮ ಆಸ್ತಿ ಹೊಂದಿರುವುದು ದೃಢಪಟ್ಟರೆ, ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ದೂರು ಸಲ್ಲಿಸಿದ್ದೇವೆ, ಎಂದು ಅಮಿತ್ ತಿವಾರಿ ತಿಳಿಸಿದ್ದಾರೆ. ಬೋಸ್ಟನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರುವ ಅಭಿಜೀತ್ ದೀಪ್ಕೆ ಅವರು, CJP ನೇತೃತ್ವದ ಪ್ರತಿಭಟನೆಗಳಲ್ಲಿ ಭಾಗವಹಿಸಲು ಜೂನ್ 6ರಂದು ಭಾರತಕ್ಕೆ ಮರಳಿದ್ದರು.
“CJP ಇನ್ನೂ ಅಧಿಕೃತವಾಗಿ ನೋಂದಾಯಿತ ರಾಜಕೀಯ ಪಕ್ಷವಲ್ಲದಿದ್ದರೂ, ಸಾರ್ವಜನಿಕವಾಗಿ ರಾಜಕೀಯ ಪಕ್ಷದಂತೆಯೇ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ, ‘ಜನತಾ ಪ್ರಾತಿನಿಧ್ಯ ಕಾಯ್ದೆ-1951’ರ ಸೆಕ್ಷನ್ 29A ಅಡಿಯಲ್ಲಿ ಅದು ನೋಂದಾಯಿತವಾಗಿದೆಯೇ ಎಂಬುದನ್ನು ಚುನಾವಣಾ ಆಯೋಗ ಪರಿಶೀಲಿಸಬೇಕು. ಒಂದು ವೇಳೆ ನೋಂದಣಿಯಾಗದಿದ್ದರೆ, ಪಕ್ಷದ ಹೆಸರಿನಲ್ಲಿ ಸಂಗ್ರಹವಾಗುತ್ತಿರುವ ನಿಧಿಯ ಮೂಲ ಮತ್ತು ಹಣಕಾಸಿನ ವ್ಯವಹಾರಗಳ ಕುರಿತು ತನಿಖೆ ನಡೆಸಬೇಕು ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ. ಅಲ್ಲದೆ, ಕಾನೂನು ನೆರವಿಗಾಗಿ ಘೋಷಿಸಲಾದ 1 ಕೋಟಿ ರೂ. ನಿಧಿಗೆ ಅನ್ವಯವಾಗುವ ಶೇಕಡಾ 18ರಷ್ಟು ಜಿಎಸ್‌ಟಿಯನ್ನು ಹೇಗೆ ಪಾವತಿಸಲಾಗುತ್ತದೆ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ಆರಂಭದಲ್ಲಿ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ವಿರೋಧಿಸಿ ಆರಂಭವಾದ ಸಿಜೆಪಿ ಪ್ರತಿಭಟನೆಯು, ತದನಂತರ ತನ್ನ ಮೂಲ ಸ್ವರೂಪದಿಂದ ದಾರಿ ತಪ್ಪಿದೆ ಎಂದು ಅಮಿತ್ ತಿವಾರಿ ಆರೋಪಿಸಿದ್ದಾರೆ.
ನೀಟ್ ಅಕ್ರಮದ ವಿರುದ್ಧ ಪ್ರತಿಭಟನೆ ನಡೆಸುವವರೆಗೆ ಯಾರಿಗೂ ಯಾವುದೇ ಆಕ್ಷೇಪವಿರಲಿಲ್ಲ. ಆದರೆ, ನಂತರದ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಮೃತ ತಾಯಿಯವರ ಕುರಿತು ತೀರಾ ಅವಹೇಳನಕಾರಿ ಮಾತುಗಳನ್ನು ಆಡಲಾಯಿತು. ಅಲ್ಲದೆ, ವಿದೇಶಿ ನಾಯಕರೊಂದಿಗಿನ ಪ್ರಧಾನಿಯವರ ರಾಜತಾಂತ್ರಿಕ ಸಂಬಂಧಗಳನ್ನು ಕೆಟ್ಟ ರೀತಿಯಲ್ಲಿ ಬಿಂಬಿಸಲಾಯಿತು. ಇಂತಹ ಹಾದಿತಪ್ಪಿದ ನಡೆಗಳ ವಿರುದ್ಧವೂ ನಾವು ದೂರು ನೀಡಿದ್ದೇವೆ,” ಎಂದು ತಿವಾರಿ ‘ಎಎನ್‌ಐ’ ಸುದ್ದಿ ಸಂಸ್ಥೆಗೆ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದು ಬಂದಿದೆ.








