


ಪುತ್ತೂರು: ಕೆಎಸ್ ಆರ್ ಟಿಸಿ ಬಸ್ ಗಳು ಕೋವಿಡ್ ಬಳಿಕವೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಿದರೂ ನೌಕರರಿಗೆ ವೇತನ ಸರಿಯಾಗಿ ನೀಡುತ್ತಿಲ್ಲವೆಂದು ಕೆಎಸ್ ಆರ್ ಟಿಸಿ ಮಜ್ದೂರ್ ಸಂಘದಿಂದ ಅ.21 ರಿಂದ ಪುತ್ತೂರು ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಕಪ್ಪುಪಟ್ಟಿಧರಿಸಿ ಮೌನ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.

ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ಆದರೆ ನಮಗೆ ಆದ ಗತಿಯನ್ನು ನಾಲ್ಕು ಜನರಿಗೆ ತಿಳಿಸುವ ಉದ್ದೇಶದಿಂದ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಸಂಸ್ಥೆಯು ದುಡಿದವರಿಗೆ ಸಂಬಳ ಕೊಡದೆ ಜೀತಪದ್ದತಿ ನಡೆಯುತ್ತಿದೆ ಎಂಬುದನ್ನು ಹೇಳಲು ಬಹಳ ಖೇಧಕರ ಸಂಗತಿಯಾಗಿದೆ ಅಲ್ಲದೇ ಈ ಹೋರಾಟಕ್ಕೆ ಸ್ಪಂದನೆ ಸಿಗದಿದ್ದರೆ ಮುಂದೆ ಅ.25ರಿಂದ ಸಂಘದ ಆಯ್ದ ಪ್ರಮುಖರು ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿದ್ದೇವೆ. ಅಲ್ಲೂ ನ್ಯಾಯ ಸಿಗದಿದ್ದ ರೆ ಮುಂದೆ ನಮಗೆ ತೊಂದರೆ ಆಗಲು ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಿದ್ದೇವೆ ಎಂದು ಕೆ.ಎಸ್.ಆರ್.ಟಿ.ಸಿ ಮಜ್ದೂರ್ ಸಂಘದ ಅಧ್ಯಕ್ಷ ನ್ಯಾಯವಾದಿ ಗಿರೀಶ್ ಮಳಿಯವರು ಮಾತನಾಡಿದರು.

ಆಗಸ್ಟ್ ತಿಂಗಳು ಮತ್ತು ಸೆಪ್ಟೆಂಬರ್ ತಿಂಗಳ ಅರ್ಧ ವೇತನವನ್ನು ಈಗಾಗಲೇ ರಾಜ್ಯ ಸರಕಾರ ಭರಿಸಿದ್ದರೂ ಇನ್ನುಳಿದ ವೇತನವನ್ನು ಕೆಎಸ್ ಆರ್ ಟಿಸಿ ಸಂಸ್ಥೆ ಈವರೆಗೆ ನೀಡದೆ ಕಾರ್ಮಿಕರ ಬದುಕಿಗೆ ತೊಂದರೆ ಕೊಡುತ್ತಿದೆ. ಹಾಗಾಗಿ ಪ್ರಸ್ತುತ ಕಾರ್ಮಿಕ ಮುಖಂಡರು ಮಾತ್ರ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದೇವೆ. ಸತ್ಯಾಗ್ರಹದಿಂದ ಸಂಸ್ಥೆಯ ದೈನಂದಿನ ಕಾರ್ಯಾಚರಣೆಗೆ ಯಾವುದೇ ಅಡ್ಡಿ ಆತಂಕಗಳು ಇರುವುದಿಲ್ಲ . ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ . ಮುಂದೆ ಈ ಹೋರಾಟದ ಕಿಚ್ಚು ರಾಜ್ಯದಾದ್ಯಂತ ಪಸರಿಸಿದಲ್ಲಿ ಇದಕ್ಕೆ ಕೇಂದ್ರ ಕಚೇರಿಯ ಅಧಿಕಾರಿಗಳೇ ನೇರ ಹೊಣೆ ಎಂಬುದನ್ನು ಸಾರ್ವಜನಿಕರಿಗೆ ತಿಳಿಸುತ್ತಿದ್ದೇ ವೆ ಎಂದು ಕೆ.ಎಸ್.ಆರ್.ಟಿ.ಸಿ ಮಜ್ದೂರ್ ಸಂಘದ ವಕ್ತಾರ ಶಾಂತರಾಮ ವಿಟ್ಲ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ಸತ್ಯಶಂಕರ ಭಟ್, ನಿರ್ವಾಹಕ ಭಾಸ್ಕರ ಶೆಟ್ಟಿ, ಕಾರ್ಯದರ್ಶಿ ರಾಮಕೃಷ್ಣ ಬಿ, ಸತ್ಯ ನಾರಾಯಣ, ಕೆ.ವೆಂಕಟ್ರಮಣ ಭಟ್, ಪಿ.ರಾಮಚಂದ್ರ , ಎ ಕರುಣಾಕರ, ಮೋನ್ ಮೂಲ್ಯ , ದೇವಯ್ಯ ಗೌಡ, ಹೆಚ್.ಬಿ.ಲೋಕಯ್ಯ , ಸಂಜೀವ ಗೌಡ ಮತ್ತಿತರರು ಉಪಸ್ಥಿತರಿದ್ದರು.

