

ಬೆಳ್ತಂಗಡಿ: ಚರ್ಚ್ ರೋಡ್ ಬಳಿಯ ನಿವಾಸಿ ವಿನೋದ್ (44.ವ) ರವರು ತಮ್ಮ ಮನೆಯ ಬಚ್ಚಲು ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕೂಲಿ ಕಾರ್ಮಿಕರಾಗಿದ್ದ ವಿನೋದ್ ರವರು ತಮ್ಮ ಪತ್ನಿ ಮೀನಾಕ್ಷಿಯವರೊಂದಿಗೆ ವಾಸ್ತವ್ಯವಿದ್ದರು. ವಿಪರೀತ ಕುಡಿತದ ಚಟವನ್ನು ಹೊಂದಿದ್ದ ಅವರು ತಮ್ಮ ಪತ್ನಿ ಶಿರ್ಲಾಲು ಗ್ರಾಮದಲ್ಲಿರುವ ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಮನೆಯ ಬಚ್ಚಲುಕೋಣೆಯಲ್ಲಿಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ತವರು ಮನೆಯಲ್ಲಿದ್ದ ಪತ್ನಿ ಮೀನಾಕ್ಷಿಯವರು ತಮ್ಮ ಪತಿಯ ಮೊಬೈಲ್ ಫೋನ್ ಗೆ ಕರೆ ಮಾಡಿದ್ದ ಸಂದರ್ಭದಲ್ಲಿ ಸ್ವಿಚ್ ಆಫ್ ಬರುತ್ತಿದ್ದು, ಬಳಿಕ ಎಷ್ಟೇ ಕರೆ ಮಾಡಿದರೂ ಕರೆ ಸ್ವೀಕರಿಸದೇ ಇದ್ದುದರಿಂದ ಅನುಮಾನಗೊಂಡು ಮನೆಗೆ ಬಂದು ನೋಡಿದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ.
ಮೃತ ವಿನೋದ್ ರವರು ಅವರಿಗಿದ್ದ ಮಾನಸಿಕ ಚಂಚಲತೆ ಅಥವಾ ಇನ್ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಪೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಮೀನಾಕ್ಷಿಯವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಳ್ತಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

