Monday, April 7, 2025
spot_imgspot_img
spot_imgspot_img

ಬ್ಯಾಂಕ್ ಖಾತೆಗೆ ಜಮೆಯಾದ ಕೋವಿಡ್ ಪರಿಹಾರ ಮೊತ್ತ ಬ್ಯಾಂಕ್ ಸಾಲದ ಮೊತ್ತದ ಬಾಕಿ ಕಂತಿಗೆ ಚುಕ್ತಾ; ಜನರಿಂದ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ

- Advertisement -
- Advertisement -

ಲಾಕ್ ಡೌನ್ ಮಧ್ಯೆ ಅಲೆದಾಟ ನಡೆಸಿದ ಬಡ ಹಾಗೂ ಮಧ್ಯಮ ವರ್ಗದ ಜನ ಅದೇಗೋ ಪರಿಹಾರಕ್ಕಾಗಿ ಆನ್ ಲೈನ್ ಅರ್ಜಿಯನ್ನೂ ಸಲ್ಲಿಸಿದರು. ಅರ್ಜಿ ಸಲ್ಲಿಸಿ ಕೆಲ ದಿನಗಳ ಬಳಿಕ ಪರಿಹಾರ ಮೊತ್ತವೂ ಖಾತೆಗೆ ಜಮೆಯಾಯಿತು. ಆರ್ಥಿಕ ಸಂಕಷ್ಟದ ಸಂದರ್ಭ ‘ಮುಳುಗುತ್ತಿದ್ದವಗೆ ಮುಳ್ಳು ಕಡ್ಡಿ ಆಸರೆ’ ಎಂಬಂತೆ ಜನ ಈ ಮೊತ್ತವನ್ನು ನಗದೀಕರಿಸಲು ಬ್ಯಾಂಕಿಗೋ, ಎಟಿಎಂಗೋ ತೆರಳಿದಾಗ ಅವರಿಗೆ ಭಾರೀ ದೊಡ್ಡ ನಿರಾಸೆಯೇ ಕಾದಿತ್ತು. ಖಾತೆಗೆ ಜಮೆಯಾದ ಅಲ್ಪ ಪರಿಹಾರ ಮೊತ್ತ ಹಿಂದಿನ ಬ್ಯಾಂಕ್ ಸಾಲದ ಮೊತ್ತದ ಬಾಕಿ ಕಂತಿಗೆ ಚುಕ್ತಾ ಆಗಿ ಹೋಗಿತ್ತು.

ಮುಖ್ಯಮಂತ್ರಿಗಳ ಆದೇಶದ ಮೇರೆಗೆ ಪ್ರತಿ ಜಿಲ್ಲಾ ಮಟ್ಟದ ಅಧಿಕಾರಿಗಳೂ ಪರಿಹಾರ ಮೊತ್ತವನ್ನು ಸಾಲದ ಮೊತ್ತಕ್ಕೆ ಚುಕ್ತಾ ಮಾಡದಂತೆ ಹಲವು ಬಾರಿ ಆದೇಶ ಹೊರಡಿಸಿದರೂ ಈ ಬ್ಯಾಂಕ್ ಅಧಿಕಾರಿಗಳಿಗೆ ಅದು ಬಾಧಿತ ಆಗಲೇ ಇಲ್ಲ. ಸರಕಾರ ಹಾಗೂ ಅಧಿಕಾರಿಗಳು ಆದೇಶ ಹೊರಡಿಸುತ್ತಿದ್ದರೂ ಬ್ಯಾಂಕ್ ಪಾಲಿಗೆ ‘ಬೆಕ್ಕಿಗೆ ಗಂಟೆ ಕಟ್ಟುವವರು ಯಾರು’ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ಬ್ಯಾಂಕಿಗೆ ಜನ ವಿಚಾರಿಸಿದರೆ ಅದು ಅಟೋಮ್ಯಾಟಿಕ್ ಪ್ರಕ್ರಿಯೆ. ಸಾಲದ ಮೊತ್ತಕ್ಕೆ ಚುಕ್ತಾ ಆಗದೆ ಇರಲು ಮುಂಚೆಯೇ ಬ್ಯಾಂಕಿಗೆ ತಿಳಿಸಬೇಕು ಎಂಬ ಉಡಾಫೆಯ ಉತ್ತರ ಬೇರೆ. ಸರಕಾರ ಆದೇಶ ಮಾಡಿದ ಬಳಿಕ ಮತ್ತೆ ಜನ ಬ್ಯಾಂಕಿಗೆ ಪ್ರತ್ಯೇಕ ಹೇಳುವ ಅವಶ್ಯಕತೇನೂ ಇದೆಯಾ ಎಂದು ಪ್ರಶ್ನಿಸುವ ಜನ ಬ್ಯಾಂಕುಗಳ ನಾಗಾಲೋಟಕ್ಕೆ ಕಡಿವಾಣ ಹಾಕುವಷ್ಟು ಭಾರ ಇಲ್ಲದ ಆದೇಶವನ್ನು ಸರಕಾರ ಹಾಗೂ ಅಧಿಕಾರಿಗಳು ಮಾಡಿದರೆಷ್ಟು ಬಿಟ್ಟರೆಷ್ಟು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೆ ಈ ಬಗ್ಗೆ ಸರಕಾರ ತಕ್ಷಣ ಮಧ್ಯ ಪ್ರವೇಶಿಸಿ ಸಂಕಷ್ಟ ಕಾಲಕ್ಕೆ ಒದಗಿಸಿದ ಪರಿಹಾರ ಮೊತ್ತವನ್ನು ಶೀಘ್ರದಲ್ಲೇ ಬ್ಯಾಂಕಿನಿಂದ ವಾಪಾಸು ಕೊಡಿಸುವಂತೆ ಆಗ್ರಹಿಸಿದ್ದಾರೆ.

ದೇವರು ಕೊಟ್ಟರೂ ಪೂಜಾರಿ ಬಿಡ ಎಂಬಂತಹ ಸನ್ನಿವೇಶ ನಿರ್ಮಾಣವಾಗಿ ಜನ ಅನುಭವಿಸುತ್ತಿರುವ ಸಂಕಷ್ಟಕ್ಕೆ ಪರಿಹಾರ ಒದಗಿಸಲು ಸಂಬಂಧಪಟ್ಟವರು ಕಾರ್ಯಪ್ರವೃತ್ತರಾಗಬೇಕು ಎಂದು ಜನ ಆಗ್ರಹಿಸಿದ್ದಾರೆ. ಜೊತೆಗೆ ಅರ್ಜಿ ಸಲ್ಲಿಸಿ ವಾರಗಳೇ ಕಳೆದರೂ ಇನ್ನೂ ಜಮೆಯಾಗದ ಕೋವಿಡ್ ಪರಿಹಾರ ಮೊತ್ತವನ್ನು ತಕ್ಷಣ ಖಾತೆಗೆ ಜಮೆಯಾಗುವಂತೆ ಕ್ರಮ ವಹಿಸುವಂತೆಯೂ ಫಲಾನುಭವಿಗಳು ಸರಕಾರವನ್ನು ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!