

ಮಂಗಳೂರು: ನಗರದ ಅಡ್ಯಾರ್-ಹರೇಕಳ ವ್ಯಾಪ್ತಿಯ ನೇತ್ರಾವತಿ ನದಿಯಲ್ಲಿ ಮರಳುಗಾರಿಕೆಯ ದೋಣಿಯೊಂದು ಮಗುಚಿ ಬಿದ್ದು, ಕಾರ್ಮಿಕನೊಬ್ಬ ನಾಪತ್ತೆಯಾದರೆ ಇನ್ನಿಬ್ಬರು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶದ ರಾಜ್ (50) ನಾಪತ್ತೆಯಾದ ಕಾರ್ಮಿಕ.

ರಾಜ್ ಮತ್ತು ಇತರ ಕಾರ್ಮಿಕರು ಶನಿವಾರ ಮರಳುಗಾರಿಕೆಗಾಗಿ ದೋಣಿಯಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಕರಾವಳಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಬಿರುಸಿನ ಮಳೆಯಾಗಿದ್ದು, ನದಿಗಳು ತುಂಬಿ ಹರಿಯುತ್ತಿದೆ. ನೇತ್ರಾವತಿ ನದಿಯಲ್ಲೂ ನೆರೆ ತುಂಬಿದ ಕಾರಣ ಅಡ್ಯಾರ್-ಹರೇಕಳ ಹೊಸ ಡ್ಯಾಮ್‌ನಲ್ಲಿ ಗೇಟ್ ತೆಗೆದು ನೀರು ಬಿಡಲಾಗುತ್ತಿದೆ. ಶನಿವಾರ ರಾಜ್ ಮತ್ತು ಇತರ ಇಬ್ಬರು ಕಾರ್ಮಿಕರು ಡ್ಯಾಮ್‌ನ ಕೆಳಭಾಗದಲ್ಲಿ ತುಂಬಿದ ನೀರಿನಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದರು. ಈ ವೇಳೆ ದೋಣಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು, ನೀರಿನ ಹರಿವಿನಲ್ಲಿ ರಾಜ್ ನಾಪತ್ತೆಯಾದರೆ, ಇನ್ನಿಬ್ಬರು ಈಜಿಕೊಂಡು ದಡ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ. ರಾಜ್ ಪತ್ತೆಗಾಗಿ ಶೋಧ ನಡೆಯುತ್ತಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

