
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಿನ್ನೆ ಪಂಜಾಬ್ನಲ್ಲಿ ಚುನಾವಣಾ ರಾಲಿ ನಡೆಸಿದ ಬಳಿಕ ಉತ್ತರ ಪ್ರದೇಶದ ಸೀತಾಪುರದಲ್ಲಿಯೂ ಪ್ರಚಾರ ನಡೆಸಿದರು. ಇಲ್ಲಿ ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದರ ಅರ್ಥ ದಂಗಾ ರಾಜ್ (ಗಲಭೆಗಳೊಂದಿಗೆ ಆಡಳಿತ ನಡೆಸುವುದು), ಮಾಫಿಯಾ ರಾಜ್ (ಮಾಫಿಯಾ ಆಡಳಿತ) ಮತ್ತು ಗೂಂಡಾರಾಜ್ (ಗೂಂಡಾಗಳ ಆಡಳಿತ) ಸಂಪೂರ್ಣವಾಗಿ ಕೊನೆಗೊಳ್ಳುವುದು ಎಂದು. ಹಾಗೇ, ಇಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ರಚನೆ ಎಂದರೆ, ಕೇಂದ್ರ ಸರ್ಕಾರದ ಯೋಜನೆಗಳನ್ನು ಡಬಲ್ ವೇಗದಲ್ಲಿ ಇಲ್ಲಿ ಜಾರಿಗೊಳಿಸುವುದು ಎಂದೂ ಅರ್ಥ ಮಾಡಿಕೊಳ್ಳಬೇಕೆಂದು ಹೇಳಿದರು.

ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಮಾಫಿಯಾ ಆಡಳಿತವಿದ್ದಾಗ ಬಡಜನರನ್ನು ಕೇಳುವವರೇ ಇರಲಿಲ್ಲ. ಅಂಥ ವಾತಾವಾರಣವನ್ನು ಇಲ್ಲಿ ಸರ್ಕಾರ ರಚನೆ ಮಾಡಿದ್ದ ರಾಜಕಾರಣಿಗಳ ಕುಟುಂಬ ಸೃಷ್ಟಿ ಮಾಡಿತ್ತು. ಯಾವ ಪಕ್ಷ ದಂಗೆಗಳು, ಮಾಫಿಯಾಗಳಿಗೆ ಬೆಂಬಲವಾಗಿ ನಿಲ್ಲುತ್ತದೆಯೋ ಆ ಪಕ್ಷ ಸರ್ಕಾರ ರಚನೆ ಮಾಡಿದರೆ ರಾಜ್ಯದ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂದು ಹೇಳಿದರು. ಹಾಗೇ ಯೋಗಿ ಆದಿತ್ಯ ನಾಥ್ ಸರ್ಕಾರದ ಯೋಜನೆಗಳನ್ನು ಶ್ಲಾಘಿಸಿದರು.

ನಿನ್ನೆ ಗುರು ರವಿದಾಸರ ಜಯಂತಿ ಹಿನ್ನೆಲೆಯಲ್ಲಿ ಅವರನ್ನು ಸ್ಮರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ವಾರಾಣಸಿಯಲ್ಲಿರುವ ಗುರು ರವಿದಾಸದ ಜನ್ಮಸ್ಥಳವನ್ನು ಅಭಿವೃದ್ಧಿಗೊಳಿಸುವಂತೆ ರವಿದಾಸರ ಅನುಯಾಯಿಗಳು ಹಿಂದಿನ ಸರ್ಕಾರವನ್ನೂ ಕೇಳಿದ್ದರು. ಆದರೆ ಅವರು ಅದನ್ನು ಕಿವಿಮೇಲೆ ಹಾಕಿಕೊಳ್ಳಲಿಲ್ಲ. ಆದರೆ ಬಿಜೆಪಿ ಸರ್ಕಾರ ಗುರು ರವಿದಾಸರ ಜನ್ಮ ಸ್ಥಳವನ್ನು ಅಭಿವೃದ್ಧಿಗೊಳಿಸಲು ಎಲ್ಲ ಕ್ರಮಗಳನ್ನೂ ಕೈಗೊಂಡಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಚುನಾವಣಾ ರ್ಯಾಲಿ ನಡೆಸುವುದಕ್ಕೂ ಪೂರ್ವ ಪ್ರಧಾನಿ ಮೋದಿ ನಿನ್ನೆ ದೆಹಲಿಯ ಕಾರೋಲ್ ಬಾಘ್ನಲ್ಲಿರುವ ಗುರು ರವಿದಾಸರ ವಿಶ್ವಾಸ ಧಾಮ ಮಂದಿರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

