



ಮಂಗಳೂರು ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಧಾರಣೆಯ ಏರಿಕೆ ಮುಂದುವರಿದಿದ್ದು ಶೀಘ್ರ ಐನೂರರ ಗಡಿಗೆ ಬಂದು ನಿಲ್ಲುವ ಸಾಧ್ಯತೆ ಗೋಚರಿಸಿದೆ. ಗಣೇಶನ ಹಬ್ಬ ವೇಳೆ ಅಡಿಕೆಯ ಬೆಲೆ ಇನ್ನಷ್ಟು ಏರಿಕೆ ಕಾಣಲಿದೆ ಎನ್ನಲಾಗಿದೆ.
ಅಡಿಕೆ ಧಾರಣೆ ಏರಿಕೆಯಾಗುತ್ತಿದ್ದರೂ, ಡಿಮ್ಯಾಂಡ್‌ಗೆ ತಕ್ಕಂತೆ ಅಡಿಕೆ ಮಾರುಕಟ್ಟೆಗೆ ಬರುತ್ತಿಲ್ಲ. ಹೊಸ ಅಡಿಕೆ ಧಾರಣೆ ವಾರದಲ್ಲಿ ಕೆಜಿಗೆ 5 ರೂ.ನಂತೆ ಏರಿಕೆ ಕಾಣುತ್ತಿದ್ದು, ಆದರೂ ಅಡಿಕೆ ಮಾರಾಟ ಮಾಡಲು ಬೆಳೆಗಾರರು ಮುಂದಾಗುತ್ತಿಲ್ಲ.
ಆ. 17ರ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ ಕೆ.ಜಿ.ಗೆ ಧಾರಣೆ 465 ರೂ.ಇದ್ದು, ಸುಳ್ಯ ತಾಲೂಕಿನ ಬೆಳ್ಳಾರೆಯ ಖಾಸಗಿ ಹೊರ ಮಾರುಕಟ್ಟೆಯಲ್ಲಿ ಹೊಸ ಅಡಿಕೆಗೆ ಕೆ.ಜಿ.ಗೆ 480 ರೂಪಾಯಿಯವರೆಗೂ ಖರೀದಿಯಾಗಿದೆ.
ಹಳೆ ಅಡಿಕೆಗೆ ಕ್ಯಾಂಪ್ಕೋದಲ್ಲಿ ಕೆ.ಜಿ.ಗೆ 560 ರೂ. ಹೊರ ಮಾರುಕಟ್ಟೆಯಲ್ಲಿ 575 ರೂ. ಇದ್ದು, ಇಲ್ಲಿಯೂ ಕೂಡ ಕೆ.ಜಿ.ಗೆ 15 ರೂ. ವ್ಯತ್ಯಾಸ ಕಂಡುಬಂದಿದೆ. ಧಾರಣೆ ಇದೇ ರೀತಿ ಮುಂದುವರಿಯುತ್ತಿದ್ದಾರೆ ಚೌತಿಯ ವೇಳೆಗೆ ಹೊಸ ಅಡಿಕೆ ಧಾರಣೆ ಪ್ರತಿ ಕಿಲೋಗೆ 500 ರೂ.ರ ಗಡಿ ದಾಟಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
